ತುಮಕೂರು : ತುಮಕೂರು ಗ್ರಾಮಾಂತರ ವ್ಯಾಪ್ತಿಗೆ ಬರುವ ಬೆಳ್ಳಾವಿ ಹೋಬಳಿಯ ನೆಲಹಾಲ್ ನಲ್ಲಿ ಗ್ರಾಮಸ್ಥರು ಸ್ಮಶಾನವಿಲ್ಲದೆ ಶವಸಂಸ್ಕಾರ ಮಾಡಲು ಪರದಾಡುತ್ತಿದ್ದಾರೆ. ಸತ್ತ ಮೃತ ವ್ಯಕ್ತಿಯ ದೇಹವನ್ನು ಗ್ರಾಮ ಪಂಚಾಯ್ತಿ ಮುಂದೆ ಇಟ್ಟು ತಮಗೆ ನ್ಯಾಯ ಸಿಗೋವರೆಗೆ ಇಲ್ಲಿಂದ ಹೋಗಲ್ಲ ಅಂತ ಪ್ರತಿಭಟನೆ ನಡೆಸುತ್ತಿದ್ದಾರೆ.
ತುಮಕೂರಿನ ಬೆಳ್ಳಾವಿ ಹೋಬಳಿಯ ನೆಲಹಾಲ್‌ನ ಗ್ರಾಮಸ್ಥರಿಗೆಂದು ಸೋಮಸಾಗರ ಗೇಟ್ ಬಳಿಯ ಸರ್ವೆ 16ರಲ್ಲಿ ಸ್ಮಶಾನ ಭೂಮಿಯನ್ನು ಗುರುತಿಸಲಾಗಿತ್ತು. ಆದರೆ ಜಾಗ ಗುರುತಿಸಿದ ಮೇಲೆ ಅಳತೆ ಮಾಡಿ ಪೆನ್ಸಿಂಗ್ ಮಾಡದೇ ಹಾಗೇ ಬಿಟ್ಟಿದ್ದ ಕಾರಣ ಇಂದು ಒತ್ತುವರಿಯಾಗಿದೆ. ಈ ಕಾರಣಕ್ಕೆ ಜನರು ಸತ್ತವರನ್ನು ಹೂಳಲು ಜಾಗವಿಲ್ಲದೆ ಪರದಾಡುತ್ತಿದ್ದಾರೆ. ಪ್ರಭಾವಿ ವ್ಯಕ್ತಿಗಳಿಂದ ಭೂ ಒತ್ತುವರಿಯಾಗಿದ್ದು, ನಮಗೆ ಶವಸಂಸ್ಕಾರ ಮಾಡಲು ಜಾಗ ಕೊಡಿ ಎಂದು ಅಂಗಲಾಚಿ ಬೇಡಿಕೊಂಡರು ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲವಂತೆ.
ಗ್ರಾಮದ 60 ವರ್ಷದ ನಾಗರಾಜ ನಿನ್ನೆ ಮೃತಪಟ್ಟಿದ್ದರು. ಆದರೆ ಶವಸಂಸ್ಕಾರ ಮಾಡಲು ತಮ್ಮದೇ ಜಾಗವಿದ್ದರೂ ಹೂಳಲು ಸ್ಥಳವಿಲ್ಲದೇ ನೆಲಹಾಲ್ ಗ್ರಾಮ ಪಂಚಾಯಿತಿ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆ ಸಂಜೆಯಿಂದಲೂ ಯಾವೊಬ್ಬ ಅಧಿಕಾರಿ ಇತ್ತ ಗಮನಹರಿಸುತ್ತಿಲ್ಲ. ನಮಗೆ ನ್ಯಾಯ ಬೇಕು, ತಹಶೀಲ್ದಾರ್ ಬಂದು ನಮಗೆ ನೀಡಿರುವ ಸ್ಮಶಾನದ ಜಾಗದ ಒತ್ತುವರಿಯನ್ನು ತೆರವುಗೊಳಿಸಿ ಶವಸಂಸ್ಕಾರಕ್ಕೆ ಅವಕಾಶ ಮಾಡಿ ಕೊಡಬೇಕೆಂದು ಆಗ್ರಹಿಸಿದ್ದಾರೆ.
ನಮಗೆ ಸ್ಮಶಾನದ ಜಾಗ ಅಳತೆ ಮಾಡಿ ಹದ್ದುಬಸ್ತು ಮಾಡಿಕೊಡಲು ತಹಶೀಲ್ದಾರ್ ಸೂಚನೆ ನೀಡಲ್ಲ. ಹಾಗಾಗಿ ನನ್ನ ಕೈಯಲ್ಲಿ ಯಾವುದೇ ಅಧಿಕಾರವಿಲ್ಲ. ಮೇಲಾಧಿಕಾರಿಗಳು ಬಂದು ಹೇಳಿದರೆ ನಾನು ಜಾಗ ಗುರುತಿಸಿ ಕೊಡುವ ಕೆಲಸ ಮಾಡ್ತಿನಿ ಅಂತ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕಿಟ್ಟಪ್ಪ ಜಾರಿಕೊಂಡಿದ್ದಾರೆ.
ಅದೇನೇ ಇರಲಿ ಸತ್ತ ವ್ಯಕ್ತಿಯನ್ನು ಹೂಳಲು ಜಾಗವಿಲ್ಲದೆ ಗ್ರಾಮಸ್ಥರು ಪ್ರತಿಭಟಿಸುತ್ತಿರುವುದು ಶೋಚನೀಯ ಸಂಗತಿ. ಮೃತ ವ್ಯಕ್ತಿ ಸಾವನ್ನಪ್ಪಿ ಇಂದಿಗೆ ಎರಡನೇ ದಿನ. ಇಂದಿಗೂ ಕೂಡ ಆ ಜೀವಕ್ಕೆ ಮುಕ್ತಿ ಸಿಕ್ಕಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಬೇಕಿದೆ.