ಮಧುಗಿರಿ: ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಹೊಸಕೆರೆ ಬಾರ್ ಮತ್ತು ರೆಸ್ಟೋರೆಂಟ್ ಮುಂಭಾಗ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಭಾರೀ ಗಂಭೀರ ಹಲ್ಲೆಗೆ ದಾರಿ ಕೊಟ್ಟಿದ್ದು, ವ್ಯಕ್ತಿಯೊಬ್ಬ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ. ಸುರೇಶ್ ಎಂಬಾತ ಹಲ್ಲೆಗೊಳಗಾದ ವ್ಯಕ್ತಿ.
ಸುರೇಶ್ ಎಂಬಾತ ಮದ್ಯ ಖರೀದಿಸಲು ಬಾರ್‌ಗೆ ತೆರಳಿದ್ದಾಗ, ಕಾಟಗೊಂಡಹಳ್ಳಿ ನಿವಾಸಿ ಕೆಂಚರಾಜು (20) ಎಂಬಾತ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು, ಬಿಯರ್ ಬಾಟಲಿಯಿಂದ ಸುರೇಶ್ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಹಲ್ಲೆ ನಡೆಸಿದ್ದು, ಸುರೇಶ್ ತೀವ್ರ ರಕ್ತಸ್ರಾವ ಉಂಟಾಗಿ, ತಕ್ಷಣವೇ ಸ್ಥಳೀಯರು ಹೊಸಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಬಳಿಕ ಮಧುಗಿರಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ ತೋರಿಸಿ ಬಳಿಕ ವೈದ್ಯರ ಮೇರೆಗೆ ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಮಿಡಿಗೇಶಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಕೆಂಚರಾಜುವನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಈ ಹಿನ್ನೆಲೆ ಸ್ಥಳೀಯ ನಿವಾಸಿಗಳು ಈ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಅನೈತಿಕ ಚಟುವಟಿಕೆಗಳು ಹೆಚ್ಚಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕೃತ್ಯಗಳ ಮೇಲೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹಿಸಿದ್ದಾರೆ