ತುಮಕೂರು : ಕೆಮಿಕಲ್ ಸಂಪು ಸ್ವಚ್ಛಗೊಳಿಸಲು ಹೋಗಿ ಇಬ್ಬರು ಸಾವು | ಮತ್ತಿಬ್ಬರು ಅಸ್ವಸ್ಥ

ಮೃತ ವೆಂಕಟೇಶ್
ಮೃತ ವೆಂಕಟೇಶ್
ಜಿಲ್ಲೆ

ತುಮಕೂರು : ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಕೈಗಾರಿಕಾ ವಸಾಹತು ಅಂತಲೇ ಖ್ಯಾತಿ ಪಡೆದಿರುವ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯೊಂದರಲ್ಲಿ ಇಂದು ಭಾರೀ ಅವಘಡವೊಂದು ನಡೆದುಹೋಗಿದೆ. ಕೆಮಿಕಲ್‌ ತುಂಬಿದ್ದ ಸಂಪನ್ನು ಸ್ವಚ್ಛಗೊಳಿಸಲು ಹೋಗಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದು, ಇನ್ನಿಬ್ಬರು ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ.

ಇತ್ತೀಚಿನ ದಿನಗಳಲ್ಲಿ ಕಾರ್ಖಾನೆಗಳಲ್ಲಿ ಸರಿಯಾದ ಸುರಕ್ಷತೆಯಿಲ್ಲದೇ ಕಾರ್ಮಿಕರು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಯಾವುದೇ ಫ್ಯಾಕ್ಟರಿಯಿರಲಿ, ಕಂಪನಿಯಿರಲಿ ತನ್ನ ಕಾರ್ಮಿಕರಿಗೆ ಸುರಕ್ಷತೆಯನ್ನು ಒದಗಿಸಬೇಕಾಗಿರುವುದು ಅವರ ಜವಾಬ್ದಾರಿ. ಆದರೆ ಅನೇಕ ಕಂಪನಿಗಳ ಬೇಜವಾಬ್ದಾರಿಯಿಂದ, ಎಡವಟ್ಟಿನಿಂದ ಅಮಾಯಕ ಜೀವಗಳು ಬಲಿಯಾಗ್ತಿವೆ. ಇಂತಹದ್ದೇ ಎಡವಟ್ಟಿನಿಂದಾಗಿ ಇಂದು ಎರಡು ಬಡಜೀವಗಳು ತುಮಕೂರಿನಲ್ಲಿ ಬಲಿಯಾಗಿವೆ.

ತುಮಕೂರು ನಗರದಿಂದ ಕೆಲವೇ ಕಿ.ಮೀ ದೂರದಲ್ಲಿರುವ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಲೋರಸ್‌ ಬಯೋ ಕಂಪನಿಯಲ್ಲಿ ಈ ದುರ್ಘಟನೆ ನಡೆದಿದೆ. ಶಿರಾ ತಾಲೂಕಿನ ತರೂರು ಗ್ರಾಮದ ನಿವಾಸಿ ಮಂಜಣ್ಣ ಎಂಬಾತ, ಈ ಕಂಪನಿಯಲ್ಲಿರುವ 1 ಲಕ್ಷ ಲೀಟರ್‌ ಸಾಮರ್ಥ್ಯದ ಕೆಮಿಕಲ್‌ ಸಂಪನ್ನು ಸ್ವಚ್ಛಗೊಳಿಸಲು ತನ್ನ ಜೊತೆ ಅದೇ ಗ್ರಾಮದ ವೆಂಕಟೇಶ್‌, ಯುವರಾಜ್‌ ಮತ್ತು ಶಿವಕುಮಾರ್‌ ಎಂಬುವವರನ್ನು ಕರೆದುಕೊಂಡು ಹೋಗಿದ್ದ.

ಸಂಪು ಸ್ವಚ್ಛಗೊಳಿಸೋದಕ್ಕೆ ಎಂದು ಮಂಜಣ್ಣ ಮೊದಲು ಕೆಳಗೆ ಇಳಿದಿದ್ದು, ಈ ವೇಳೆ ಉಸಿರುಗಟ್ಟಿದಂತಾಗಿ ಮಂಜಣ್ಣ ಸಂಪಿನೊಳಗೆ ಬೀಳ್ತಾನೆ. ಆತ ಬೀಳ್ತಿದ್ದಂತೆ ತಕ್ಷಣವೇ ಆತನನ್ನು ರಕ್ಷಿಸಲು ವೆಂಕಟೇಶ್‌ ಮತ್ತು ಯುವರಾಜ್‌ ಕೂಡ ಸಂಪಿನೊಳಗೆ ಇಳಿಯುತ್ತಾರೆ. ಆದರೆ ಆ ಕೆಮಿಕಲ್‌ ವಾಸನೆಯಿಂದ ಉಸಿರುಗಟ್ಟಿ ಅವರು ಕೂಡ ಪ್ರಜ್ಞೆ ತಪ್ಪಿ ಬಿದ್ದು ಬಿಡ್ತಾರೆ. ಕೊನೆಗೆ ಅಲ್ಲಿಯೇ ಇದ್ದ ಕಂಪನಿಯ ಸೆಕ್ಯೂರಿಟಿ ಗಾರ್ಡ್‌ ಮಧುಗಿರಿ ಮೂಲದ ಪ್ರತಾಪ್‌ ಕೆಳಗೆ ಇಳಿದಿದ್ದ. ಆದರೆ ಆತ ಕೂಡ ಮೂರ್ಛೆ ಹೋಗಿ ಬಿದ್ದಿದ್ದಾನೆ. ಕೊನೆಗೆ ಉಸಿರುಗಟ್ಟಿ ವೆಂಕಟೇಶ್‌ ಮತ್ತು ಸೆಕ್ಯೂರಿಟಿ ಗಾರ್ಡ್‌ ಪ್ರತಾಪ್‌ ಸಾವನ್ನಪ್ಪಿದರೆ, ಮಂಜಣ್ಣ ಮತ್ತು ಯುವರಾಜ್‌ ತೀವ್ರ ಅಸ್ವಸ್ಥಗೊಂಡಿದ್ದು, ಇವರಿಬ್ಬರನ್ನು ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗ್ತಿದೆ.

ಇನ್ನು ಕಂಪನಿಯವರ ನಿರ್ಲಕ್ಷ್ಯದಿಂದಲೇ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಕೆಮಿಕಲ್‌ ಸಂಪನ್ನು ಸ್ವಚ್ಛ ಮಾಡೋದು, ಅದು ಡೇಂಜರಸ್‌ ಅಂತಾ ಗೊತ್ತಿದ್ರೂ ಕೂಡ ಆ ಕಂಪನಿಯವರು ಈ ಕಾರ್ಮಿಕರಿಗೆ ಯಾವುದೇ ಸೇಫ್ಟಿ ಐಟಂಗಳನ್ನು ಕೊಟ್ಟಿರಲಿಲ್ಲವಂತೆ. ಕೇವಲ ಮಾಸ್ಕ್‌ಗಳನ್ನು ಮಾತ್ರ ಕೊಟ್ಟಿದ್ದಾರೆ. ಹೀಗಾಗಿ ಕೆಮಿಕಲ್‌ ಸಂಪಿಗೆ ಇಳಿಯುತ್ತಿದ್ದಂತೆ ಕಾರ್ಮಿಕರು ಮೂರ್ಛೆ ಹೋಗಿದ್ದು, ಈ ಅವಘಡ ಸಂಭವಿಸಿದೆ. ಕೋರಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಒಟ್ಟಿನಲ್ಲಿ ಕಂಪನಿಯ ನಿರ್ಲಕ್ಷ್ಯಕ್ಕೆ ಎರಡು ಅಮಾಯಕ ಜೀವಗಳು ಬಲಿಯಾಗಿದ್ದು ಮಾತ್ರ ದುರಂತವೇ ಸರಿ.

Author:

...
Sushmitha N

Copy Editor

prajashakthi tv

share
No Reviews