ಕಾಸರಗೋಡು : ಚಲಿಸುತ್ತಿದ್ದ ಕಾರೊಂದು ಇಂದು ಬೆಳಿಗ್ಗೆ ಬೆಂಕಿಗೆ ಆಹುತಿಯಾದ ಘಟನೆ ಕಾಸರಗೋಡು ಜಿಲ್ಲೆ ಚೆರ್ಕಳ ಸಮೀಪದ ಬೇವಿಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕಾರಿನಲ್ಲಿದ್ದ ಐವರು ಅಪಾಯದಿಂದ ಪಾರಾಗಿದ್ದು, ಭಾರಿ ಅನಾಹುತ ತಪ್ಪಿದೆ.
ಮುಂಬೈನಿಂದ ಕಣ್ಣೂರಿನ ಕಣ್ಣಾಪುರಕ್ಕೆ ತೆರಳುತ್ತಿದ್ದ ಕಾರು ಬೇವಿಂಜೆ ಬಳಿ ತಲುಪಿದಾಗ ಬೋನೆಟ್‌ನಿಂದ ಹೊಗೆ ಹೊರಬರುವುದು ಕಂಡುಬಂದಿತು. ತಕ್ಷಣವೇ ಕಾರಿನಲ್ಲಿದ್ದ ಪ್ರಯಾಣಿಕರು ಕಾರಿನಿಂದ ಹೊರಬಂದು ಜೀವ ಉಳಿಸಿಕೊಂಡಿದ್ದಾರೆ. ಕ್ಷಣಾರ್ಧದಲ್ಲಿ ಕಾರು ಹೊತ್ತಿಕೊಂಡಿದ್ದು, ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
ಅಗ್ನಿಗಾಹುತಿಯಾದ ಕಾರಿನೊಳಗೆ ಇದ್ದ ಹಣ, ನಾಲ್ಕು ಪವನ್ ಚಿನ್ನಾಭರಣ, ಎರಡು ಮೊಬೈಲ್ ಫೋನ್‌ಗಳು ಹಾಗೂ ಕ್ಯಾಮರಾ ಸೇರಿದಂತೆ ಬೆಲೆಬಾಳುವ ವಸ್ತುಗಳು ಸಂಪೂರ್ಣವಾಗಿ ಹೊತ್ತಿ ಉರಿದಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಮುಂಬೈ ನಲ್ಲಿರುವ ಇಕ್ಬಾಲ್ ಅಹ್ಮದ್ ಎಂಬವರು ಪತ್ನಿ , ಮಕ್ಕಳ ಸಹಿತ ಕಣ್ಣಾಪುರದಲ್ಲಿರುವ ಪತ್ನಿಯ ಸಹೋದರನ ಮನೆಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಒಂದೂವರೆ ತಿಂಗಳ ಹಿಂದೆಯಷ್ಟೆ ಸಿ. ಎನ್.ಜಿ ಕಾರು ಖರೀದಿಸಿದ್ದರು ಎನ್ನಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ತಕ್ಷಣವೇ ಧಾವಿಸಿದ ಕಾಸರಗೋಡು ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದರು.