ಹಾಸನ : ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಮಹಿಳೆ ಸಾವು

ಹಾಸನ : ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಮಹಿಳೆ ಸಾವನ್ನಪ್ಪಿರುವ ಧಾರುಣ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅಂಕಿಹಳ್ಳಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಗಜೇಂದ್ರಪುರ ಗ್ರಾಮದ ನಿವಾಸಿಯಾದ ಚಂದ್ರಮ್ಮ ಎಂಬುವವರು ಮೃತ ಮಹಿಳೆಯಾಗಿದ್ದಾರೆ.

ಇನ್ನು ಮೃತ ಮಹಿಳೆ ಚಂದ್ರಮ್ಮ ಡಾ. ಕರುಣ್ ಅವರ ಕಾಫಿ ತೋಟದಲ್ಲಿ ದಿನಗೂಲಿ ಕೆಲಸಕ್ಕಾಗಿ ಆಗಮಿಸಿದ್ದರು. ತೋಟದಲ್ಲಿ ಕೆಲಸ ನಿರತರಾಗಿದ್ದ ವೇಳೆ, ಅರಣ್ಯದಿಂದ ಅಪ್ರತೀಕ್ಷಿತವಾಗಿ ನುಗ್ಗಿದ ಕಾಡಾನೆಯೊಂದು ಏಕಾಏಕಿ ಚಂದ್ರಮ್ಮ ಮೇಲೆ ದಾಳಿ ಮಾಡಿದೆ. ಆನೆ ತನ್ನ ಸೊಂಡಿಲಿನಿಂದ ಅವರನ್ನು ಎತ್ತಿ ಬಿಸಾಡಿದ ನಂತರ ಕಾಲಿನಿಂದ ತುಳಿದು ಘೋರವಾಗಿ ಗಾಯಗೊಳಿಸಿದೆ. ಈ ದಾಳಿಯಿಂದ ಸ್ಥಳದಲ್ಲಿಯೇ ಚಂದ್ರಮ್ಮ ಮೃತಪಟ್ಟಿದ್ದಾರೆ.

ಇನ್ನು ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ಸ್ಥಳೀಯರು ಮತ್ತು ಕೆಲಸಗಾರರ ತಕ್ಷಣವೇ ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಅರೇಹಳ್ಳಿ ಠಾಣೆಯ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಘಟನೆ ಗ್ರಾಮದಲ್ಲಿ ಭೀತಿಯ ವಾತಾವರಣವನ್ನು ಉಂಟುಮಾಡಿದೆ. ಕಾಡಾನೆ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

 

Author:

...
Keerthana J

Copy Editor

prajashakthi tv

share
No Reviews