ತುಮಕೂರು:
ಚಿನ್ನ, ದುಡ್ಡು, ಆಸ್ತಿ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತೆ. ಆದರೆ ಇಲ್ಲೊಬ್ಬ ಆಟೋ ಚಾಲಕ ತನ್ನ ಬಳಿಯೇ ಬಂಗಾರ ಹುಡುಕಿಕೊಂಡು ಬಂದರೂ ಕೂಡ ತಿರಸ್ಕರಿಸಿ ಮಾನವೀಯತೆಯನ್ನು ಮೆರೆದಿದ್ದಾರೆ. ಪ್ರಯಾಣಿಕರೊಬ್ಬರ ಸುಮಾರು 4 ಲಕ್ಷ ಬೆಲೆ ಬಾಳುವ ಚಿನ್ನಾಭರಣವನ್ನು ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದ ಅಪರೂಪದ ಘಟನೆಗೆ ತುಮಕೂರು ಸಾಕ್ಷಿಯಾಗಿದೆ.
ಹಾಸನ ಜಿಲ್ಲೆ ಅರಸೀಕೆರೆ ಮೂಲದ ಗಾಯತ್ರಿ ಎಂಬ ಮಹಿಳೆ ಸಮಾರಂಭಕ್ಕಾಗಿ ನಿನ್ನೆ ತುಮಕೂರಿನ ಕುಂದೂರು ಗ್ರಾಮಕ್ಕೆ ಬಂದಿದ್ದರು. ಫಂಕ್ಷನ್ ಮುಗಿಸಿಕೊಂಡು ವಾಪಸ್ ಹೋಗಲು ಆಟೋದಲ್ಲಿ ತುಮಕೂರು ಬಸ್ ನಿಲ್ದಾಣಕ್ಕೆ ತೆರಳಿದ್ದಾರೆ. ಬಸ್ ನಿಲ್ದಾಣದಲ್ಲಿ ಗಡಿಬಿಡಿಯಾಗಿ ಆಟೋ ಇಳಿದ ಗಾಯತ್ರಿ ಹಾಗೂ ಮತ್ತೊಬ್ಬ ಪ್ರಯಾಣಿಕರು, ಬಸ್ ನಿಲ್ದಾಣದ ಒಳಗೆ ಹೋಗ್ತಾರೆ. ಆಟೋ ಚಾಲಕರು ಕೂಡ ಅವರನ್ನು ಇಳಿಸಿ ಸ್ವಲ್ಪ ದೂರ ಹೋದಮೇಲೆ ಆಟೋದಲ್ಲಿ ಬ್ಯಾಗ್ ಇರೋದು ಪತ್ತೆಯಾಗಿದೆ. ಆಟೋದಲ್ಲಿ ಚಿನ್ನಾಭರಣ ಇರೋದನ್ನು ಕಂಡು ಆಟೋ ಚಾಲಕ ರವಿ ಕುಮಾರ್ ಪ್ರಯಾಣಿಕರಿಗಾಗಿ ಸುಮಾರು 2 ಗಂಟೆಗಳ ಕಾಲ ಹುಡುಕಾಟ ನಡೆಸಿದ್ದಾರೆ ಆದರೆ ಪ್ರಯಾಣಿಕರು ಸಿಗಲಿಲ್ಲ.
ಪ್ರಯಾಣಿಕರಾದ ಗಾಯತ್ರಿಗೆ ಎಷ್ಟೋ ಹೊತ್ತಾದ ಮೇಲೆ ಚಿನ್ನ ಇರುವ ಬ್ಯಾಗ್ ನೆನಪಾಗಿದೆ. ಕೂಡಲೇ ಬಸ್ ನಿಲ್ದಾಣದಿಂದ ಹೊರ ಬಂದು ಆಟೋಗಾಗಿ ಹುಡುಕಾಟ ನಡೆಸಿದ್ದು ಪ್ರಯೋಜನವಾಗಲಿಲ್ಲ. ಹತಾಶರಾಗಿ ಕೊನೆಯದಾಗಿ ಪೊಲೀಸ್ ಠಾಣೆಗೆ ದೂರು ಕೊಡಲು ಬಂದಿದ್ದರು. ಅದೇ ವೇಳೆ ಆಟೋ ಚಾಲಕ ರವಿ ಕುಮಾರ್ ಕೂಡ ಪ್ರಯಾಣಿಕರ ಬ್ಯಾಗ್ ಅನ್ನು ಪ್ರಯಾಣಿಕರಿಗೆ ಒಪ್ಪಿಸಿ ಎಂದು ಪೊಲೀಸ್ ಠಾಣೆಯತ್ತ ಬಂದಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಆಟೋ ಚಾಲಕ ರವಿಕುಮಾರ್, ಬ್ಯಾಗ್ ಕಳೆದುಕೊಂಡ ಗಾಯತ್ರಿಗೆ ತಮ್ಮ ಬ್ಯಾಗ್‌ನನ್ನು ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ. ಚಿನ್ನ ಇರೋ ತಮ್ಮ ಬ್ಯಾಗ್ ಮರಳಿ ಸಿಕ್ಕಿದ್ದಕ್ಕೆ ಪ್ರಯಾಣಿಕರಾದ ಗಾಯತ್ರಿ ನಿಟ್ಟುಸಿರು ಬಿಟ್ಟಿದ್ದು, ಆಟೋ ಚಾಲಕ ರವಿಕುಮಾರ್‌ಗೆ ಕೃತಜ್ಞತೆಯ ರೂಪವಾಗಿ ಕೊಂಚ ದುಡ್ಡು ಕೊಡಲು ಮುಂದಾಗಿದ್ದಾರೆ. ಆದರೆ ಆ ಹಣವನ್ನು ಪಡೆಯದೇ ಇದು ನನ್ನ ಕರ್ತವ್ಯ ಎನ್ನುತ್ತಾ ಮತ್ತೊಮ್ಮೆ ಪ್ರಾಮಾಣಿಕತೆ ಮೆರೆದಿದ್ದಾರೆ.
ಆಟೋ ಚಾಲಕ ರವಿಕುಮಾರ್‌ನ ಪ್ರಾಮಾಣಿಕತೆಗೆ ಪೊಲೀಸರು, ಸ್ಥಳೀಯರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಟೋ ಚಾಲಕರು ಸದಾ ದುಡ್ಡು ಪೀಕುತ್ತಾರೆ. ಬಾಡಿಗೆ ಜಾಸ್ತಿ ಪಡೆಯುತ್ತಾರೆ ಎಂದು ಕಿಡಿಕಾರುವ ಜನರ ಮಧ್ಯೆ ಇಂತಹ ಪ್ರಾಮಾಣಿಕ ಆಟೋ ಚಾಲಕ ರವಿಕುಮಾರ್ ಪ್ರಾಮಾಣಿಕತೆಗೆ ಮೆರೆದಿದ್ದಾರೆ.