ತುಮಕೂರು:
ಅಬ್ಬಬ್ಬ.. ಹೀಗೆ ಎಲ್ಲೆಂದ್ರೆಲ್ಲಿ ಬಿದ್ದಿರೋ ಎಣ್ಣೆಯ ಬಾಟಲ್, ಟೆಟ್ರ ಪ್ಯಾಕೆಟ್ಗಳು. ಗುಟುಕ ಏಟಿಗೆ ಕಾಪೌಂಡ್ ಸುತ್ತ ಗಬ್ಬೆದ್ದು ನಾರ್ತಿರೋಜಾಗ. ಅತ್ತ ಸಂಪೂರ್ಣ ದೂಳು ತುಂಬಿಕೊಂಡು ಯಾವುದೋ ಸಿನಿಮಾ ಸೆಟ್ಗೆ ಹಾಕಿದ ಭೂತಬಂಗಲೆಯಂತೆ ಕಾಣ್ತಿರೋ ಸ್ಥಳ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚೇರ್ಗಳನ್ನು ಹಾಕಿದ್ರು ಕೂರೋಕೆ ಜನ ಇಲ್ಲದೆ ಬಣಗುಡುತ್ತಿರೋ ಹಾಲ್. ಯುಪಿಎಸ್ ಇದ್ರು ಕೂಡ ಪ್ರಯೋಜನಕ್ಕೆ ಬಾರದೆ ಮೂಲೆಲೆ ಬಿದ್ದಿದೆ. ಇಂತಹದೊಂದು ದೃಶ್ಯ ಕಂಡು ಬಂದಿದ್ದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.
ಪ್ರತಿ ಗ್ರಾಮದಿಂದ ಹಿಡಿದು ನಗರದವರೆವಿಗೂ ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ಸರ್ಕಾರ ಆಯಾ ಸಮುದಾಯದವರಿಗೆ ಸಮುದಾಯ ಭವನವನ್ನು ನಿರ್ಮಿಸಿ ಕೊಡುತ್ತೆ. ಅದ್ರಲ್ಲಿ ಅಲ್ಲಿನ ಸ್ಥಳೀಯ ಮಕ್ಕಳ ಓದಿಗೆ ಹೆಚ್ಚು ಹೊತ್ತು ಕೊಟ್ಟು ಬೇಕಾದ ಸಾಮಗ್ರಿಗಳನ್ನು ಒದಗಿಸುತ್ತದೆ. ಆದ್ರೆ ತುಮಕೂರಿನ ಎನ್.ಆರ್. ಕಾಲೋನಿಯಲ್ಲಿ ನಿರ್ಮಿಸಲಾಗಿರುವ ಸಮುದಾಯ ಶೈಕ್ಷಣಿಕ ಭವನ ಹೆಸರಿಗೆ ಮಾತ್ರ ಇದೇ ಅಷ್ಟೆ. ನಿರ್ವಹಣೆ ಮಾಡಬೇಕಿದ್ದ ಪಾಲಿಕೆಯ ನಿರ್ಲಕ್ಷ್ಯಕ್ಕೆ ತುಕ್ಕು ಹಿಡಿದು ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಾಡಾಗ್ತಿದೆ.
2017 ರಂದು ಎನ್.ಆರ್.ಕಾಲೋನಿಯಲ್ಲಿ ಈ ಸಮುದಾಯ ಶೈಕ್ಷಣಿಕ ಭವನವನ್ನು ಕಟ್ಟಲಾಗಿತ್ತಂತೆ. ಆದ್ರೆ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಕಳೆದ ಮೂರು ವರ್ಷಗಳಿಂದ ಈ ಸಮುದಾಯದ ಭವನಕ್ಕೆ ಬೀಗ ಜಡಿಯಲಾಗಿದೆ. ಇದ್ರಿಂದ ಅಲ್ಲಿನ ಮಕ್ಕಳಿಗೆ ಶೈಕ್ಷಣಿಕವಾಗಿ ಯಾವುದೇ ಪ್ರಯೋಜನವಾಗ್ತಿಲ್ಲ. ಸಮುದಾಯ ಭವನದಲ್ಲಿ ಹೊಸ ಪೀಠೋಪಕರಣಗಳು, ಅಗತ್ಯ ವಸ್ತುಗಳು ಇದ್ದರೂ ಕೂಡ ನಿರ್ವಹಣಾ ಜವಾಬ್ದಾರಿಯಿಲ್ಲದ ಪಾಳುಕೊಂಪೆಯಾಗಿದೆ. ನಿರಂತರವಾಗಿ ಭದ್ರತಾ ಕೊರತೆಯ ಆತಂಕವಿರುವುದರ ಜೊತೆಗೆ, ಧೂಳಿನಿಂದ ತುಂಬಿ ಹೋಗಿರುವ ಭವನ ಸ್ಥಳೀಯ ಜನರ ಉಪಯೋಗಕ್ಕೆ ಬಾರದೆ ತುಕ್ಕು ಹಿಡಿಯುತ್ತಿದೆ. ಈ ಭವನವನ್ನು ಸಾರ್ವಜನಿಕರ ಬಳಕೆಗೆ ಕೊಡಿ ಎಂದು ಅಲ್ಲಿನ ಸ್ಥಳೀಯ ನೂರಾರು ಬಾರಿ ಮನವಿ ಮಾಡಿಕೊಂಡ್ರು ಪಾಲಿಕೆ ಅಧಿಕಾರಿಗಳು ಮಾತ್ರ ಕ್ಯಾರೆ ಅಂತಿಲ್ವಂತೆ.
ಇನ್ನು ಸ್ಥಳೀಯ ಯುವಕ ಕೃಷ್ಣ ಮಾತನಾಡಿ, ಸಾರ್ ಈ ಶೈಕ್ಷಣಿಕ ಭವನ ಕಟ್ಟಿದ್ದು ಇಲ್ಲಿನ ಎಸ್ಸಿ ಜನಾಂಗದ ಶೈಕ್ಷಣಿಕ ಅಭಿವೃದ್ಧಿಯಾಗಲಿ ಅಂತ. ಆದ್ರೆ 2017 ರಲ್ಲಿ ನಿರ್ಮಾಣವಾದ ಈ ಭವನ ಇಂದಿಗೂ ಓಪನ್ ಆಗಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈ ಭವನ ನಿರ್ಮಾಣ ಮಾಡಿದ್ದಾರೆ. ಆದ್ರೆ ಈ ಭವನ ನಮ್ಗೆ ಉಪಯೋಗಕ್ಕೆ ಬರ್ತಿಲ್ಲ. ಈ ಸಮುದಾಯ ಭವನ ಮತ್ತೊಂದೆಡೆ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಾಡಾಗ್ತಿದೆ. ಅಧಿಕಾರಿಗಳು ಮಾತ್ರ ಇತ್ತ ಸುಳಿಯುತ್ತಿಲ್ಲ ಅಂತಾ ಆಕ್ರೋಶ ಹೊರಹಾಕಿದರು.
ಇದೀಗ ಸ್ಥಳೀಯ ಯುವಕರು ಈ ಭವನವನ್ನು ಮತ್ತೆ ಚಾಲನೆಗೆ ತರಲು ಉತ್ಸಾಹ ತೋರಿಸುತ್ತಿದ್ಧಾರೆ. ಆ ಮೂಲಕ ಮಹಾನಗರ ಪಾಲಿಕೆಯ ಗಮನ ಸೆಳೆಯಲು ಮುಂದಾಗಿದ್ದಾರೆ. ಪಾಲಿಕೆಗೆ ಸೆಡ್ಡು ಹೊಡೆದು ಯುವಕರೇ ಅಭಿವೃದ್ಧಿ ಮಾಡುವ ಮುನ್ನ ಪಾಲಿಕೆಯೇ ಮುಂದೆ ಬಂದು ಶೈಕ್ಷಣಿಕ ಸಮುದಾಯ ಭವನದ ಕಾಯಕಲ್ಪಕ್ಕೆ ಮುಂದಾಗಬೇಕಿದೆ.