ಶಿರಾ :
ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿಯವರ ಹತ್ಯೆಯನ್ನು ಖಂಡಿಸಿ ಇಂದು ಶಿರಾ ನಗರದಲ್ಲಿ ಬಿಜೆಪಿ ವತಿಯಿಂದ ನಗರದ ಸರಕಾರಿ ಆಸ್ಪತ್ರೆ ವೃತ್ತದಲ್ಲಿ ಪ್ರತಿಭಟನೆಯನ್ನು ನಡೆಸಿ ಸರ್ಕಾರದ ವಿರುದ್ದ ಘೋಷಣೆಯನ್ನು ಕೂಗಿ ಹತ್ಯೆಯನ್ನು ಮಾಡಿದವರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಧುಗಿರಿ ಸಂಘಟನೆ ಮಾಜಿ ಅಧ್ಯಕ್ಷ ಬಿ ಕೆ ಮಂಜುನಾಥ್, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದೂಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತಾ, ಅರೋಪಿಗಳನ್ನು ಬಂಧಿಸುವಲ್ಲಿ ವಿಫಲವಾಗಿದ್ದು ಅವರಿಗೆ ರಕ್ಷಣೆಯನ್ನು ನೀಡುತ್ತಿದೆ. ರಾಜ್ಯದ ಸರ್ಕಾರ ಹಿಂದೂಗಳ ವಿರೋಧಿ ಸರ್ಕಾರವಾಗಿದೆ. ಇಲ್ಲಿ ಹಿಂದೂಗಳು ನೆಮ್ಮದಿಯಾಗಿ ಬದುಕುವುದು ಕಷ್ಟಕರವಾಗಿದೆ ಎಂದರು.
ಇನ್ನು ಇದೇ ವೇಳೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಕರ್ನಾಟಕ ಎನ್ನುವುದು ಆರೋಪಿಗಳ ಸ್ವರ್ಗವಾಗಿದೆ. ಇಲ್ಲಿ ಏನೇ ಮಾಡಿದರು ಸಹಾ ಯಾರೂ ಕೇಳುವವರಿಲ್ಲ. ರಾಜ್ಯದಲ್ಲಿ ಆಡಳಿತವನ್ನು ನಡೆಸುತ್ತಿರುವವರು ಸರ್ಕಾರ ನೀಚ ಕೆಲಸವನ್ನು ಮಾಡುವವರಿಗೆ ಕುಮ್ಮಕ್ಕು ನೀಡುತ್ತಿದೆಯೇ ಅನ್ನೋ ಅನುಮಾನ ಮೂಡುತ್ತಿದೆ. ಸರ್ಕಾರ ಒಂದು ಜನಾಂಗವನ್ನು ಮಾತ್ರ ಓಲೈಕೆ ಮಾಡುವಲ್ಲಿ ಮುಂದಾಗಿದೆ. ಇದರಿಂದ ಆ ಕೋಮಿನ ಜನತೆಯ ಅರ್ಭಟ ಹೆಚ್ಚಾಗಿದ್ದು, ಇದನ್ನು ತಡೆಯುವವರಿಲ್ಲ ಎನ್ನುವಂತಾಗಿದೆ. ಇದನ್ನು ನಿಲ್ಲಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಈ ಪ್ರತಿಭಟನೆಯಲ್ಲಿ ಶಿರಾ ತಾಲ್ಲೂಕಿನ ಬಿಜೆಪಿಯ ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.