ಶಿರಾ :
ಜೀನಿ ಕಂಪನಿ ಮಾಲೀಕ ದಿಲೀಪ್ ಕುಮಾರ್ ವಿರುದ್ಧ ಆತನ ಕಂಪನಿಯ ಉದ್ಯೋಗಿಯೇ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ವಿಚಾರ ನಿಮಗೆಲ್ಲಾ ಗೊತ್ತಿದೆ. ಈ ಬಗ್ಗೆ ಕಳ್ಳಂಬೆಳ್ಳ ಪೊಲೀಸ್ ಠಾಣೆಗೆ ಸಂತ್ರಸ್ತೆ ದೂರನ್ನು ಕೂಡ ಕೊಟ್ಟಿದ್ದು, ದಿಲೀಪನ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ. ಇನ್ನು ಇದರ ಬೆನ್ನಲ್ಲೇ ಈ ಜೀನಿ ದಿಲೀಪನ ವಿಡಿಯೋವೊಂದು ವೈರಲ್ ಆಗಿತ್ತು. ತಾನು ತುಂಬಾ ಸಾಚಾ ತನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ನಾನೇ ಇಡೀ ಶಿರಾವನ್ನು ಅಭಿವೃದ್ಧಿ ಮಾಡಿದ್ದೀನಿ ಅಂತೆಲ್ಲಾ ಆ ವಿಡಿಯೋದಲ್ಲಿ ಹೇಳಿಕೊಂಡಿದ್ದ. ಇದೀಗ ಜೀನಿ ದಿಲೀಪನ ಮತ್ತೊಂದು ಆಡಿಯೋ ಬಿಡುಗಡೆಯಾಗಿದ್ದು, ಆತನ ಸಾಚಾತನ ಏನು ಅನ್ನೋದು ಮತ್ತೊಮ್ಮೆ ಬಯಲಾಗಿದೆ.
ವಿಡಿಯೋ ಮಾಡಿ ದೊಡ್ಡ ದೊಡ್ಡದಾಗಿ ಮಾತನಾಡಿದ್ದ ಜೀನಿ ದಿಲೀಪ, ಇದೀಗ ನ್ಯಾಯಾಲಯದ ಕಣ್ಣಿಗೇ ಮಣ್ಣು ಎರಚಲು ಹೊರಟಿದ್ದ ವಿಚಾರ ಬೆಳಕಿಗೆ ಬಂದಿದೆ. ಜೀನಿ ದಿಲೀಪನ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಜಾತಿನಿಂದನೆ ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ಆದರೆ ತುಮಕೂರು ಪೊಲೀಸರು ಮಾತ್ರ ಈ ಮಹಾಶಯನನ್ನ ಇನ್ನೂ ಬಂಧಿಸಿಲ್ಲ. ತನ್ನ ಮೇಲೆ ಕೇಸ್ ಆಗ್ತಿದ್ದಂತೆ ತಲೆಮರೆಸಿಕೊಂಡಿರುವ ಜೀನಿ ದಿಲೀಪ, ಇದೀಗ ಅಜ್ಞಾತ ಸ್ಥಳದಲ್ಲಿ ಕುಳಿತು ಸಂತ್ರಸ್ತೆ ಮತ್ತು ಆಕೆಯ ಕುಟುಂಬಸ್ಥರಿಗೆ ಧಮ್ಕಿ ಹಾಕುವ ಕೆಲಸ ಮಾಡಿದ್ದಾನೆ.
ಸಂತ್ರಸ್ತೆಯ ಗಂಡನಿಗೆ ಬೇರೊಬ್ಬರಿಂದ ಕಾನ್ಫರೆನ್ಸ್ ಕರೆ ಮಾಡಿರುವ ದಿಲೀಪ, ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುವಾಗ ತನ್ನದೇನು ತಪ್ಪಿಲ್ಲ ಅಂತಾ ಸಂತ್ರಸ್ತೆಯ ಕಡೆಯಿಂದ ಹೇಳಿಸುವಂತೆ ಒತ್ತಡ ಹಾಕಿದ್ದಾನೆ. ಅಷ್ಟೇ ಅಲ್ಲ, ಕೋತಿ ತಾನು ತಿಂದು ಮೇಕೆಯ ಬಾಯಿಗೆ ಒರೆಸಿತು ಅನ್ನೋ ಹಾಗೆ ತಾನು ಮಾಡೋದ್ನೆಲ್ಲಾ ಮಾಡಿ, ಇದನ್ನೆಲ್ಲಾ ಮಾಧ್ಯಮದವರ ತಲೆಗೆ ಕಟ್ಟಿಬಿಡು ಅಂತಾ ಸಂತ್ರಸ್ತೆಯ ಗಂಡನಿಗೆ ಧಮ್ಕಿ ಹಾಕಿದ್ದಾನೆ. ನನ್ನನ್ನ ಕೆಲಸದಿಂದ ವಜಾ ಮಾಡಿದ್ದರು. ಈ ಬಗ್ಗೆ ನಾನು ದೂರು ನೀಡಲು ಠಾಣೆಗೆ ಹೋದ ವೇಳೆ, ಮಾಧ್ಯಮದವರೇ ಲೈಂಗಿಕ ದೌರ್ಜನ್ಯ ಅಂತಾ ದೂರು ಕೊಡು ಅಂತಾ ಹೇಳಿದ್ರು ಅಂತಾ ನ್ಯಾಯಾಧೀಶರ ಮುಂದೆ ಹೇಳು ಅಂತಾ ದಿಲೀಪ ಒತ್ತಡ ಹಾಕಿದ್ದಾನೆ.
ಇನ್ನು ಈ ಬಗ್ಗೆ ಸಂತ್ರಸ್ತ ಮಹಿಳೆ ಮತ್ತೊಂದು ವಿಡಿಯೋ ಹೇಳಿಕೆಯನ್ನು ನೀಡಿದ್ದು, ತಾನು ಯಾರ ಒತ್ತಡದಿಂದಲೂ ದೂರು ನೀಡಿಲ್ಲ. ತನ್ನ ಮೇಲೆ ಏನು ದೌರ್ಜನ್ಯ ಆಗಿತ್ತು. ಅದನ್ನು ದೂರು ಕೊಟ್ಟಿದ್ದೇನೆ. ಏನು ನಡೆಯಿತು ಅದನ್ನೇ ನ್ಯಾಯಾದೀಶರ ಮುಂದೆ ಹೇಳುತ್ತೇನೆ ಅಂತಾ ಹೇಳಿಕೊಂಡಿದ್ದಾರೆ.
ಇನ್ನು ಜೀನಿ ಕಂಪನಿಯ ಮಾಜಿ ಉದ್ಯೋಗಿಯೊಬ್ಬರು ಸಂತ್ರಸ್ತ ಮಹಿಳೆಗೆ ಕರೆ ಮಾಡಿ ನಮಗೂ ಇದೇ ರೀತಿ ನಡೆದಿತ್ತು. ಹೀಗಾಗಿ ಮಾನ ಇದ್ದರೆ ಎಲ್ಲಿ ಬೇಕಾದರೂ ದುಡಿದು ತಿನ್ನಬಹುದು ಅಂತಾ ಕೆಲ್ಸ ಬಿಟ್ಟುಬಂದೆವು. ನಿನಗೆ ನನ್ನ ಬೆಂಬಲ ಇರುತ್ತೆ ಅಂತಾ ಹೇಳಿರುವ ಆಡಿಯೋ ಕೂಡ ಬಿಡುಗಡೆಯಾಗಿದೆ.