ಶಿರಾ :
ಒಂದಿಂಚೂ ಜಾಗವನ್ನು ಬಿಡದ ಜನರು. ಇದೀಗ ಸ್ಮಶಾನವನ್ನು ಬಿಡದೇ ಭೂ ಒಡೆಯಲು ಮುಂದಾಗಿದ್ದಾರೆ. ಖಾಲಿ ನಿವೇಶನ ಇದ್ದರೆ ಸಾಕು ರಾತ್ರೋ ರಾತ್ರಿ ಆ ಜಾಗವನ್ನು ಹೊಡೆಯಲು ಮುಂದಾಗ್ತಾರೆ. ಖಾಲಿ ಜಾಗ ಇರ್ಲಿ ಇದೀಗ ಸ್ಮಶಾನದ ಮೇಲೆ ಭೂ ಕಳ್ಳರ ವಕ್ರದೃಷ್ಟಿ ನೆಟ್ಟಿದ್ದು, ಸ್ಮಶಾನದ ಜಾಗದಲ್ಲಿದ್ದ ಸಮಾಧಿಗಳನ್ನು ಏಕಾಏಕಿ ಧ್ವಂಸ ಮಾಡ್ತಾ ಇದ್ದು ಸ್ಥಳೀಯರು ಆಕ್ರೋಶಕ್ಕೆ ಕಾರಣವಾಗಿದೆ.
ಶಿರಾ ಪಟ್ಟಣದ ಬೂದಿಣ್ಣೆಯಲ್ಲಿ ಲೇಔಟ್ ಮಾಲೀಕನೊಬ್ಬ ಲೇಔಟ್ ನಿರ್ಮಾಣಕ್ಕಾಗಿ ಪುರಾತನವಾದ ಸಮಾಧಿಗಳನ್ನೇ ಧ್ವಂಸ ಮಾಡ್ತಾ ಇದ್ದು, ತಮ್ಮ ಪೂರ್ವಜರ ಸಮಾಧಿ ನಾಶಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕ್ತಾ ಇದ್ದಾರೆ. ನೂರಾರು ವರ್ಷಗಳಿಂದ ಇರುವ ಸ್ಮಶಾನ ಜಾಗವನ್ನು ಕಬಳಿಕೆ ಮಾಡಲು ಭೂ ಮಾಲೀಕ ಮುಂದಾಗಿದ್ದು, ಏಕಾಏಕಿ ಸಮಾಧಿಗಳನ್ನು ನಾಶ ಮಾಡ್ತಾ ಇದ್ದಾನೆ. ಭೂಮಿಯನ್ನು ಬಗೆದು ಕಳೆಬರವನ್ನು ಹೊರತೆಗೆದು ಬಿಸಾಕುತ್ತಿದ್ದು ಮುನುಷ್ಯರ ಮೂಳೆಗಳು, ತಲೆ ಬುರುಡೆಗಳನ್ನು ಕಂಡು ಸ್ಥಳೀಯರ ಆಕ್ರೋಶದ ಕಟ್ಟೆ ಹೊಡೆದಿದೆ.
ಲೇಔಟ್ ಮಾಲೀಕ ಜಗದೀಶ್ ಎಂಬಾತ ನಕಲಿ ದಾಖಲೆ ಸೃಷ್ಟಿ ಮಾಡಿ ಸಾರ್ವಜನಿಕ ಸ್ಮಶಾನ ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡ್ತಾ ಇದ್ದಾರೆ. ಆರೋಪ ಹೊತ್ತಿರುವ ಜಗದೀಶ್ , ಲೇಔಟ್ ನಿರ್ಮಾಣಕ್ಕಾಗಿ ಜೆಸಿಬಿಗಳನ್ನು ಕರೆತಂದು ಸ್ಮಶಾನದಲ್ಲಿದ್ದ ಸಮಾಧಿಗಳನ್ನು ಹೊಡೆದಾಕುತ್ತಿದ್ದಾರೆ. ಅಲ್ಲದೇ ಅಂತ್ಯಕ್ರಿಯೆ ಮಾಡಿದ್ದ ಮೃತದೇಹಗಳನ್ನು ಹೊರತೆಗೆಯುತ್ತಿದ್ದಾರೆ. ನೂರಾರು ವರ್ಷಗಳಿಂದ ಇದ್ದ ಸಮಾಧಿಗಳನ್ನು ಕಣ್ಣ ಮುಂದೆ ನಾಶ ಆಗ್ತಾ ಇರೋದಕ್ಕೆ ಲೇಔಟ್ ಮಾಲೀಕನ ವಿರುದ್ಧ ಸ್ಥಳೀಯ ಮಹಿಳೆಯರು ತಿರುಗಿಬಿದ್ದಿದ್ದು, ಸ್ಮಶಾನದಲ್ಲಿ ಹೆಣ ಹೂಳೋದು ಬಿಟ್ಟು ಮನೆ ಮುಂದೆ ಹೂಳಲು ಆಗುತ್ತಾ ಎಂದು ಕಿಡಿಕಾರುತ್ತಿದ್ದಾರೆ. ಲೇಔಟ್ ಮಾಫೀಯಾದಿಂದ ಸ್ಥಳೀಯರ ಭಾವನೆಗೆ ಧಕ್ಕೆ ಉಂಟಾಗ್ತಿದೆ. ಕೂಡಲೇ ಭೂಕಳ್ಳರಿಂದ ಸ್ಮಶಾನವನ್ನು ರಕ್ಷಣೆ ಮಾಡಬೇಕಿದೆ ಎಂದು ಒತ್ತಾಯಿಸಿದ್ದಾರೆ. ಸದ್ಯ ಈ ಸಂಬಂಧ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಮಶಾನವನ್ನು ರಕ್ಷಣೆ ಮಾಡುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.