Cricket :
ಹಿಟ್ಮ್ಯಾನ್ ಅಂತಲೇ ಖ್ಯಾತಿ ಪಡೆದಿರುವ ರೋಹಿತ್ ಶರ್ಮಾ ಇದೀಗ ಟೆಸ್ಟ್ ಕ್ರಿಕೆಟ್ಗೆ ಧಿಡೀರ್ ನಿವೃತ್ತಿ ಘೋಷಿಸಿದ್ದಾರೆ. ನಿನ್ನೆ ಸಾಯಂಕಾಲ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಹಾಕಿಕೊಂಡು ನಿವೃತ್ತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಒಂದು ಕಡೆ ಹಿಟ್ಮ್ಯಾನ್ ಅಭಿಮಾನಿಗಳು ಸಖತ್ ಬೇಸರಗೊಂಡಿದ್ದರೆ, ಮತ್ತೊಂದು ಕಡೆ ಮುಂದಿನ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ವಹಿಸೋದ್ಯಾರು ಅನ್ನೋ ಪ್ರಶ್ನೆ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಕಾಡೋದಕ್ಕೆ ಶುರುವಾಗಿದೆ. ಹಾಗಿದ್ದರೆ ಟೀಂ ಇಂಡಿಯಾ ನಾಯಕನ ಪಟ್ಟ ಯಾರಿಗೆ ಒಲಿಯುತ್ತೆ?
ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲು ಸಾಕಷ್ಟು ಆಟಗಾರರು ರೇಸ್ನಲ್ಲಿದ್ದಾರೆ. ಹಲವು ಅನುಭವಿ ಆಟಗಾರರು, ಕೆಲವು ಯುವ ಆಟಗಾರರು ಕೂಡ ಟೀಂ ಇಂಡಿಯಾ ಕ್ಯಾಪ್ಟನ್ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ. ಮೊದಲನೇಯದಾಗಿ ಭಾರತ ಟಿ20 ಹಾಗೂ ಏಕದಿನ ತಂಡಗಳ ಉಪನಾಯಕರಾಗಿರುವ ಶುಭ್ಮನ್ ಗಿಲ್ ಟೆಸ್ಟ್ ತಂಡದ ಕ್ಯಾಪ್ಟನ್ಸಿ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. ತಂಡದ ಭವಿಷ್ಯದ ದೃಷ್ಟಿಯಿಂದ ಗಿಲ್ಗೆ ಕ್ಯಾಪ್ಟನ್ ಪಟ್ಟ ನೀಡುವ ಬಗ್ಗೆ ಬಿಸಿಸಿಐ ಆಯ್ಕೆ ಸಮಿತಿ ಚರ್ಚೆ ನಡೆಸಿದೆ ಎನ್ನಲಾಗಿದೆ.
ಇನ್ನು ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಈಗಾಗಲೇ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಿದ್ದಾರೆ. ಅಲ್ಲದೇ ಬೂಮ್ರಾ ಸದ್ಯ ಟೆಸ್ಟ್ ತಂಡದ ಉಪನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಬಿಸಿಸಿಐ ಬೂಮ್ರಾಗೆ ಪಟ್ಟ ಕಟ್ಟಿದರೂ ಅಚ್ಚರಿಪಡಬೇಕಿಲ್ಲ.
ಇನ್ನು ಕನ್ನಡಿಗ ಕೆ.ಎಲ್.ರಾಹುಲ್ ಕೂಡ ಕ್ಯಾಪ್ಟನ್ಸಿ ರೇಸ್ನಲ್ಲಿದ್ದಾರೆ. ರಾಹುಲ್ ಈ ಹಿಂದೆ ಸೌತ್ ಆಫ್ರಿಕಾ ಟೂರ್ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಜೊತೆಗೆ ರಾಹುಲ್ ಸದ್ಯ ಭಾರತ ಟೆಸ್ಟ್ ತಂಡ ಖಾಯಂ ಸದಸ್ಯರಾಗಿದ್ದಾರೆ. ಹೀಗಾಗಿ ಅನುಭವಕ್ಕೆ ಮಣೆ ಹಾಕಲು ಮುಂದಾದರೆ ಕನ್ನಡಿಗ ಭಾರತ ತಂಡದ ನಾಯಕನಾಗುವ ಸಾಧ್ಯತೆಯಿದೆ.
ಇನ್ನು ವೈಟ್ ಬಾಲ್ ಫಾರ್ಮ್ಯಾಟ್ನಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ಅನುಭವ ಹೊಂದಿರುವ ರಿಷಭ್ ಪಂತ್ ಕೂಡ ನಾಯಕತ್ವದ ರೇಸ್ನಲ್ಲಿದ್ದಾರೆ. ಆದರೆ ರಿಷಭ್ ಪಂತ್ ಇತ್ತೀಚಿನ ಪ್ರದರ್ಶನ ಅವರ ಆಯ್ಕೆಗೆ ತೊಡಕು ಉಂಟು ಮಾಡುವ ಸಾಧ್ಯತೆಯಿದೆ.
ಅದೇನೆ ಇರಲಿ…ಭಾರತ ಟೆಸ್ಟ್ ತಂಡದ ಕ್ಯಾಪ್ಟನ್ಸಿ ರೇಸ್ನಲ್ಲಿ ಸದ್ಯ ಗಿಲ್ ಮತ್ತು ಬೂಮ್ರಾ ಹೆಸರು ಮುಂಚೂಣಿಯಲ್ಲಿದ್ದರೂ ಬಿಸಿಸಿಐ ನಡೆ ಮಾತ್ರ ನಿಗೂಢವಾಗಿ ಉಳಿದಿದೆ. ಸದ್ಯದಲ್ಲೇ ಇಂಗ್ಲೆಂಡ್ ಸರಣಿಗೆ ಭಾರತ ತಂಡ ಪ್ರಕಟವಾಗಲಿದ್ದು, ಇದಕ್ಕೆಲ್ಲಾ ಉತ್ತರ ಸಿಗಲಿದೆ.