ಶಿರಾ:
ಶಿರಾ ನಗರ ಅದೆಷ್ಠೇ ಬೆಳೆದ್ರು ಕೂಡ ಅಭಿವೃದ್ದಿ ವಿಚಾರದಲ್ಲಿ ಹಿಂದೆಯೇ ಉಳಿದಿದೆ. ಶಿರಾ ತಾಲೂಕಿನ ಲೆಕ್ಕನಹಳ್ಳಿ ಗ್ರಾಮದಲ್ಲಿ ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ರಸ್ತೆ ಕಾಮಗಾರಿಯಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದ್ರೆ, ಮತ್ತೊಂದ್ಕಡೆ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರೋದ್ರಿಂದ ಅಂಗಡಿ, ಮನೆಗಳಿಗೆ ನೀರು ನುಗ್ತಿದ್ದು, ಮನೆಗಳು ಕುಸಿಯುವ ಭೀತಿಯಲ್ಲಿವೆ.
ಶಿರಾ-ಅಮರಾಪುರ ರಾಜ್ಯ ಹೆದ್ದಾರಿಯ ರಸ್ತೆ ಅಗಲೀಕರಣ ನಡೀತಿದ್ದು, ತಿಂಗಳುಗಳೇ ಕಳೆಯುತ್ತಾ ಬಂದ್ರೂ ಕೂಡ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಇದ್ರಿಂದ ಸದಾ ಒಂದಲ್ಲ ಒಂದು ಅವಾಂತರ ಸೃಷ್ಟಿಯಾಗ್ತಿದ್ದು, ಕಳೆದ ರಾತ್ರಿ ಸುರಿದ ಮಳೆಗೆ ರಸ್ತೆ ಬದಿಯಲ್ಲಿದ್ದ ನಿವಾಸಿಗಳು ನಿದ್ದೆಗೆಡುವಂತೆ ಸ್ಥಿತಿ ನಿರ್ಮಾಣವಾಗಿದೆ. ಗುತ್ತಿಗೆ ಪಡೆದಿರುವ ಕಂಪನಿ ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿದ್ದು, ಎಲ್ಲೆಂದರಲ್ಲಿ ಗುಂಡಿ ತೆಗೆದು ಹಾಗೆ ಬಿಟ್ಟಿದ್ದು, ಮಳೆಗಾಲದಲ್ಲಿ ನೀರು ಹರಿಯಲು ಜಾಗವಿಲ್ದೇ ರಸ್ತೆಯುದ್ದಕ್ಕೂ ನೀರು ನಿಂತು, ಚರಂಡಿ ನೀರಿನ ಜೊತೆಗೆ ಮನೆಗಳಿಗೆ ನುಗ್ತಿದೆ, ಇದ್ರಿಂದ ರಸ್ತೆಗೆ ಹೊಂದಿಕೊಂಡತೆ ಸಾಕಷ್ಟು ಮನೆಗಳಿದ್ದು, ರಸ್ತೆ ಅಗಲೀಕರಣ ನೆಪದಲ್ಲಿ ಆಳವಾದ ಕಾಲುವೆ, ಹೊಂಡಗಳನ್ನು ತೋಡಿ ಹಾಗೆ ಬಿಟ್ಟಿದ್ದಾರೆ.
ಹೀಗಾಗಿ ನೀರು ಸರಾಗವಾಗಿ ಹರಿಯದೇ ಮನೆಗಳ ಬಳಿ ನೀರು ನಿಲ್ತಿದ್ದು, ಸೊಳ್ಳೆಗಳೂ ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ಇನ್ನು ಈ ಬಗ್ಗೆ ಜಿಲ್ಲಾಡಳಿತ ಹಾಗೂ ಕಂಪನಿಯವರು ನೀರು ನಿಲ್ಲದಂತೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ನಿವಾಸಿಗಳು ಒತ್ತಾಯ ಮಾಡುತ್ತಿದ್ದಾರೆ.