ಚಿಕ್ಕಬಳ್ಳಾಪುರ:
ಇನ್ನೇನು ಯುಗಾದಿ ಹಬ್ಬ ಬಂದೇ ಬಿಡ್ತು... ಯುಗಾದಿ ಹಬ್ಬದ ಮರುದಿನ ಬರೋದೇ ವರ್ಷದ ತೊಡಕು. ಹೊಸತೊಡಕು ಅಂತಲೂ ಕರೆಯುವ ಈ ದಿನ ಮಾಂಸ ಪ್ರಿಯರಿಗೆ ಹಬ್ಬವೋ ಹಬ್ಬ. ಹೊಸತೊಡಕಿನ ದಿನ ಮಾರುಕಟ್ಟೆಗಳಲ್ಲಿ ಮಾಂಸ ಮಾರಾಟದ ಭರಾಟೆ ಜೋರಾಗಿರುತ್ತೆ.ಈ ಹಿನ್ನೆಲೆ ವರ್ಷದ ತೊಡಕು ಇನ್ನೊಂದು ವಾರ ಇರುವಾಗಲೇ ಶೆಡ್ ನಲ್ಲಿರುವ ಹಂದಿಗಳು ರಾತ್ರೋರಾತ್ರಿ ಕಳ್ಳರ ಕೈಚಳಕದಿಂದ ಮಂಗಮಾಯವಾಗುತ್ತಿವೆ.
ದೊಡ್ಡಬಳ್ಳಾಪುರ, ರಾಜಾನುಕುಂಟೆ, ದೇವನಹಳ್ಳಿಯಲ್ಲಿ ಹಂದಿ ಕಳ್ಳರ ಹಾವಳಿ ಹೆಚ್ಚಾಗಿದೆ. ಸಾಮಾನ್ಯವಾಗಿ ಹಂದಿ ಶೆಡ್ ಗಳು ಊರ ಹೊರವಲಯದಲ್ಲಿ ಇರುತ್ತವೆ. ಮಾಲೀಕರು ಹಂದಿ ಶೆಡ್ ಬಳಿ ಇಲ್ಲದಿರುವಾಗ ಹೊಂಚಾಕಿ ರಾತ್ರೋರಾತ್ರಿ ಬರುವ ಕಳ್ಳರು, ಸಿಸಿಟಿವಿ ಇದ್ದರೂ ರಾಜಾರೋಷವಾಗಿ ಶೆಡ್ ಗೆ ನುಗ್ಗಿ ಸಿಕ್ಕಸಿಕ್ಕ ಹಂದಿಗಳನ್ನು ಗೂಡ್ಸ್ ವಾಹನಕ್ಕೆ ತುಂಬಿಕೊಂಡು ಪರಾರಿಯಾಗುತ್ತಿದ್ದಾರೆ. ಮಾಲೀಕರು ಬೆಳಗ್ಗೆ ಶೆಡ್ ಬಳಿ ಬಂದು ನೋಡಿದಾಗ ಹಂದಿಗಳು ನಾಪತ್ತೆಯಾಗಿರುವುದು ಗೊತ್ತಾಗುತ್ತಿದೆ. ಹೀಗೆ ಕಳೆದ ಒಂದು ವಾರದಲ್ಲಿ ಮೂರು ಕಡೆ ಸುಮಾರು 120ಕ್ಕೂ ಹೆಚ್ಚು ಹಂದಿಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಬೈರಸಂದ್ರ ಗ್ರಾಮದಲ್ಲಿ ಮಾ.23ರ ಶನಿವಾರ ರಾತ್ರಿ ಹಂದಿ ಶೆಡ್ ಗೆ ನುಗ್ಗಿದ ಕಳ್ಳರು ಸುಮಾರು 34 ಹಂದಿ ಮರಿಗಳ ಕಳ್ಳತನ ಮಾಡಿದ್ದಲ್ಲದೇ, ಸೋಮವಾರ ರಾತ್ರಿ ಕೂಡ ಅದೇ ಹಂದಿ ಶೆಡ್ ಗೆ ನುಗ್ಗಿ 17 ತಾಯಿ ಹಂದಿಗಳನ್ನ ಕಳವು ಮಾಡಿದ್ದಾರಂತೆ.
ಅದೇರೀತಿ ಯಲಹಂಕದ ಹೆಸರಘಟ್ಟ ಹೋಬಳಿಯ ರಾಜಾನುಕುಂಟೆ ಸಮೀಪದ ಸೀತ ಕೆಂಪನಹಳ್ಳಿ ಬಳಿ ಮಾ.22ರ ರಾತ್ರಿ ಹಂದಿ ಶೆಡ್ ಕಾವಲುಗಾರನಿಗೆ ಹೆದರಿಸಿ ಮೊಬೈಲ್ ಕಸಿದು ಸುಮಾರು 20 ಹಂದಿಗಳನ್ನು ಕಳವು ಮಾಡಲಾಗಿದೆಯಂತೆ. ಇದ್ರ ಜೊತೆಗೆ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನಿಮಂಗಲ ಗ್ರಾಮದ ಲೋಕೇಶ್ ಎಂಬುವವರ ಶೆಡ್ ನಲ್ಲಿ ಮಾ.21ರಂದು ರಾಜಾರೋಷವಾಗಿ 50 ಹಂದಿಗಳನ್ನು ಕಳ್ಳತನ ಮಾಡಿದ್ದಾರಂತೆ. ಹಂದಿ ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಶೆಡ್ ಗೆ ೬ ಜನರ ತಂಡ ಎಂಟ್ರಿಯಾಗುತ್ತೆ. ಓರ್ವ ಕಾವಲು ಕಾಯುತ್ತಿದ್ದರೆ, ಮತ್ತೆ ನಾಲ್ಕು ಜನ ಹಂದಿಗಳನ್ನು ಶೆಡ್ ನಿಂದ ಹೊತ್ತುಕೊಂಡು ಬಂದು ಲೋಡ್ ಮಾಡುತ್ತಿದ್ದಾರೆ. ಮತ್ತೊಬ್ಬ ವಾಹನದ ಮೇಲೆ ನಿಂತು ಹಂದಿಗಳನ್ನ ತುಂಬಿಕೊಳ್ಳುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹೀಗೆ ಕಳೆದ ಒಂದು ವಾರದಲ್ಲಿ ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸುಮಾರು 120ಕ್ಕೂ ಹೆಚ್ಚು ಹಂದಿಗಳನ್ನು ಕಳ್ಳರು ಕದ್ದೊಯ್ದಿರುವ ಪ್ರಕರಣ ನಡೆದಿದೆ. ವರ್ಷವಿಡೀ ಕಣ್ಣಲ್ಲಿ ಕಣ್ಣಿಟ್ಟು ಸಾಕಿದ್ದ ಪ್ರಾಣಿಗಳನ್ನು ಕಳ್ಳರು ಕ್ಷಣಮಾತ್ರದಲ್ಲಿ ಎಗರಿಸಿ ಪರಾರಿಯಾಗ್ತಿದ್ದಾರೆ. ಈ ಹಂದಿಗಳನ್ನ ಹಬ್ಬಕ್ಕೆ ಮಾರಾಟ ಮಾಡಲು ಮಾಲೀಕರು ಸಿದ್ಧತೆ ಮಾಡಿಕೊಂಡಿದ್ದರು. ವರ್ಷವೆಲ್ಲಾ ಸಾಕಿ ಇನ್ನೇನು ಹಬ್ಬಕ್ಕೆ ಮೂರ್ಕಾಸು ಲಾಭವನ್ನು ನೋಡುತ್ತೇವೆ ಎಂದುಕೊಂಡಿದ್ದ ರೈತರಿಗೆ ಕಳ್ಳರ ಹಾವಳಿಯಿಂದ ಈಗ ಶಾಕ್ ಎದುರಾಗಿದೆ. ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತು ಖದೀಮರನ್ನು ಪತ್ತೆಹಚ್ಚಿ ಹೆಡೆಮುರಿ ಕಟ್ಟುತ್ತಾ ಕಾದುನೋಡಬೇಕಿದೆ.