ಪಾವಗಡ:
ಪಾವಗಡ ತಾಲೂಕಿನ ರೊಪ್ಪ ಗ್ರಾಮ ಪಂಚಾಯ್ತಿಯಲ್ಲಿ ಭ್ರಷ್ಟಾಚಾರ ಆಗ್ತಿದೆ ಎಂದು ಆರೋಪಿಸಿ ಪಂಚಾಯ್ತಿ ಸದಸ್ಯ ಹನುಮಂತರಾಯಪ್ಪ ಗ್ರಾಮ ಪಂಚಾಯ್ತಿ ಕಚೇರಿ ಮುಂದೆ ಸತತ ಎಂಟು ದಿನಗಳಿಂದ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ನಿನ್ನೆ ಶಿವರಾತ್ರಿ ಹಬ್ಬದ ದಿನವೂ ಕೂಡ ಪ್ರತಿಭಟನೆ ಮಾಡ್ತಾರೆ ಎಂದು ರಾತ್ರೋ ರಾತ್ರಿ ಪ್ರತಿಭಟನೆಗೆ ಹಾಕಿದ್ದ ಟೆಂಟ್ನನ್ನು ತೆಗೆದುಕೊಂಡು ಹೋಗಿದ್ದಾರೆ.
ಇನ್ನು ಟೆಂಟ್ ಮಾಯವಾಗಿದ್ದು, ಬಿಸಿಲಲ್ಲೇ ಕಚೇರಿ ಗೇಟ್ ಮುಂದೆ ಪ್ರತಿಭಟನೆ ನಡೆಸಿ ಗ್ರಾಮ ಪಂಚಾಯ್ತಿ ಅಧ್ಯಕ್ಷರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಪಂಚಾಯ್ತಿಯಲ್ಲಿ ನಡೆದಂತಹ ಹಗರಣಗಳ ಬಗ್ಗೆ ತನಿಖೆ ಆಗಬೇಕು ಅಲ್ಲದೇ PDO ಅಮಾನತು ಗೊಳಿಸುವವರೆಗೂ ಪ್ರತಿಭಟನೆ ಮಾಡುತ್ತೇನೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಹನುಮಂತರಾಯಪ್ಪ ಕಿಡಿಕಾರಿದರು.
ಗ್ರಾಮ ಪಂಚಾಯ್ತಿ ಸದಸ್ಯ ಹನುಮಂತರಾಯಪ್ಪ ಪ್ರತಿಭಟನಾ ಸ್ಥಳಕ್ಕೆ ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷ ಸೊಗಡು ವೆಂಕಟೇಶ್ ಭೇಟಿ ನೀಡಿ, ಅವರ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಈ ವೇಳೆ ಮಾತನಾಡಿದ ಅವರು, ಹನುಮಂತರಾಯಪ್ಪ ಪ್ರತಿಭಟನೆ ಮಾಡುತ್ತಿರುವುದು ನ್ಯಾಯಯುತವಾಗಿದೆ. ಅವರಿಗೆ ಅಧಿಕಾರಿಗಳು ಸ್ಪಂದಿಸದೆ ಇರುವುದು ನೋಡಿದರೆ ಗ್ರಾಮ ಪಂಚಾಯ್ತಿಯ ಕಾರ್ಯವೈಖರಿ ಹೇಗಿದೆ ಎಂದು ಗೊತ್ತಾಗುತ್ತೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಿಇಒ ಜಿ.ಪ್ರಭುಗೆ ಒತ್ತಾಯಿಸಿದರು.