ನವದೆಹಲಿ :
ಕಾಶ್ಮೀರದಲ್ಲಿ ನಡೆದ 26 ಪ್ರವಾಸಿಗರ ಹತ್ಯೆ ಖಂಡಿಸಿ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಉಗ್ರರ ವಿರುದ್ಧ ಭಾರತೀಯರು ಕಿಡಿ ಕಾರುತ್ತಿದ್ದಾರೆ. ಪಿಎಂ ಮೋದಿ ಸರ್ಕಾರ ಕೂಡ ರಾಜತಾಂತ್ರಿಕ ದಾಳಿ ನಡೆಸುತ್ತಿದೆ. ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಎಲ್ಲಾ ರಾಜ್ಯಗಳ ಸಿಎಂ ಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಪಾಕಿಸ್ತಾನಕ್ಕೆ ವಾಪಾಸ್ ಹೋಗಲು ಯಾರಾದರೂ ವಿರೋಧ ವ್ಯಕ್ತಪಡಿಸಿದರೆ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ಮುಂದಾಗಿದೆ.
ಉಗ್ರರ ಅಟ್ಟಹಾಸದ ವಿರುದ್ದ ಭಾರತ ತಿರುಗಿಬಿದ್ದಿದೆ. ಇಡೀ ದೇಶದಲ್ಲಿ ನೆಲೆಸಿರುವ ಸುಮಾರು 537 ಜನ ಪಾಕಿಸ್ತಾನಿ ಪ್ರಜೆಗಳನ್ನು ವಾಪಾಸ್ ಕಳುಹಿಸಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ಗಡುವಿನಂತೆ ಭಾರತದಿಂದ ವಾಪಸ್ ಹೋಗಲು ವಿಫಲರಾದ ಯಾವುದೇ ಪಾಕಿಸ್ತಾನದ ಪ್ರಜೆಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ. ಇದಲ್ಲದೇ, 3 ವರ್ಷ ಜೈಲು ಶಿಕ್ಷೆ ಅಥವಾ ಗರಿಷ್ಠ 3 ಲಕ್ಷ ರೂ.ಗಳ ದಂಡ ಹಾಗೂ ಎರಡನ್ನೂ ವಿಧಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪಾಕಿಸ್ತಾನಿ ಉಗ್ರರು 26 ಪ್ರವಾಸಿಗರನ್ನು ಕೊಂದು ಹಾಕಿದ ನಂತರ, ಕೇಂದ್ರ ಸರ್ಕಾರ ಪಾಕ್ ಪ್ರಜೆಗಳು ಭಾರತ ಬಿಟ್ಟು ತೊಲಗುವಂತೆ ನೋಟಿಸ್ ನೀಡಿತ್ತು. ಅದರಂತೆ ವೀಸಾಗಳನ್ನು ಹೊಂದಿರುವವರು ಭಾರತದಿಂದ ನಿರ್ಗಮಿಸಲು ಇರುವ ಗಡುವು ಏಪ್ರಿಲ್ 26ಕ್ಕೆ ಮತ್ತು ವೈದ್ಯಕೀಯ ವೀಸಾಗಳನ್ನು ಹೊಂದಿರುವವರು ಏಪ್ರಿಲ್ 29ರೊಳಗೆ ದೇಶ ಬಿಡಬೇಕು ಎಂದು ಖಡಕ್ ಸೂಚನೆ ನೀಡಲಾಗಿತ್ತು. ಅಲ್ಲದೇ, 12 ವಿಭಾಗಗಳ ವೀಸಾಗಳನ್ನು ಹೊಂದಿರುವವರು ಭಾನುವಾರದೊಳಗೆ ಭಾರತ ತೊರೆಯಬೇಕಿತ್ತು. ವಲಸೆ ಮತ್ತು ವಿದೇಶಿಯರ ಕಾಯಿದೆ 2025ರ ಪ್ರಕಾರ, ಭಾರತದಲ್ಲಿ ಅವಧಿ ಮೀರಿ ತಂಗುವಿಕೆ, ವೀಸಾ ಷರತ್ತುಗಳನ್ನು ಉಲ್ಲಂಘಿಸುವುದು ಅಥವಾ ನಿರ್ಬಂಧಿತ ಪ್ರದೇಶಗಳಲ್ಲಿ ಅತಿಕ್ರಮಣ ಮಾಡಿದರೆ 3 ವರ್ಷಗಳ ಜೈಲು ಶಿಕ್ಷೆ ಮತ್ತು 3 ಲಕ್ಷ ರೂ.ವರೆಗೆ ದಂಡ ವಿಧಿಸಬಹುದು ಎನ್ನಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ಮಾಡಿ, ದೇಶ ತೊರೆಯಲು ನಿಗದಿಪಡಿಸಿದ ಗಡುವು ಮೀರಿ ಯಾವುದೇ ಪಾಕಿಸ್ತಾನಿ ಪ್ರಜೆ ಭಾರತದಲ್ಲಿ ಉಳಿಯದಂತೆ ನೋಡಿಕೊಳ್ಳುವಂತೆ ಸೂಚಿಸಿದ್ದಾರೆ.