ನೆಲಮಂಗಲ :
ಆಟೋಗೆ ವೇಗವಾಗಿ ಬಂದ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಬಾಲಕಿ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿಯಲ್ಲಿ ನಡೆದಿದೆ. ಯಂಟಾಗನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ವಾಟರ್ ಮ್ಯಾನ್ ಆಗಿ ಕೆಲಸ ಮಾಡ್ತಿದ್ದ ಶಾಂತಿನಗರ ಗ್ರಾಮದ ನಿವಾಸಿ ಶ್ರೀನಿವಾಸ್, ಪುಟ್ಟಮ್ಮ ಹಾಗೂ 13 ವರ್ಷದ ವರ್ಷಿಣಿ ಎಂಬುವರು ಮೃತ ದುರ್ದೈವಿಗಳಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರಿನಿಂದ ಹೊರನಾಡಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ವೇಗವಾಗಿ ಚಲಿಸುತ್ತಿದ್ದು, ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎನ್ನಲಾಗ್ತಿದೆ. ಇನ್ನು ಈ ಭೀಕರ ಅಪಘಾತದಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಗಾಯಗೊಂಡವರನ್ನು ಕೂಡಲೇ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಸದ್ಯ ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.