ಶಿರಾ:
ವ್ಯಕ್ತಿಯೋರ್ವ ಆಯತಪ್ಪಿ 50 ಅಡಿ ಆಳದ ಬಾವಿಗೆ ಬಿದ್ದಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಚರಣೆ ನಡೆಸಿ ಆತನನ್ನು ರಕ್ಷಿಸಲಾಗಿದೆ. ಈ ಘಟನೆ ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಕಳುವರಹಳ್ಳಿಯಲ್ಲಿ ನಡೆದಿದೆ.
ಶಿರಾ ತಾಲೂಕಿನ ಕಳುವರಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ನರಸಿಂಹ ಮೂರ್ತಿ ಎಂಬುವರು ನಿನ್ನೆ ರಾತ್ರಿ ತಮ್ಮ ತೋಟದಲ್ಲಿ ಹೋಗುವಾಗ ಆಯತಪ್ಪಿ ಬಾವಿಗೆ ಬಿದ್ದಿದ್ದು, ಕಿರುಚಾಡಲು ಶುರು ಮಾಡಿದ್ದಾರೆ. ಚೀರಾಟ ಕೇಳಿದ ಗ್ರಾಮಸ್ಥರು ಬಾವಿ ಬಳಿ ಬಂದು ನೋಡಿದಾಗ ವ್ಯಕ್ತಿಯೋರ್ವ ಬಾವಿಗೆ ಬಿದ್ದಿರುವ ವಿಚಾರ ತಿಳಿದು ಬಂದಿದೆ. ಕೂಡಲೇ ಗ್ರಾಮಸ್ಥರು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಏಣಿ ಸಹಾಯದಿಂದ ಬಾವಿಗೆ ಬಿದ್ದಿರೋ ನರಸಿಂಹಮೂರ್ತಿಯನ್ನು ರಕ್ಷಣೆ ಮಾಡಿದ್ದಾರೆ. ನರಸಿಂಹ ಮೂರ್ತಿ ಸೊಂಟದ ಭಾಗದಲ್ಲಿ ಮೂಳೆಗೆ ಪೆಟ್ಟಾಗಿದ್ದು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕತ್ಸೆ ನೀಡಲಾಯ್ತು, ಬಳಿಕ ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಸಿ ಚಿಕಿತ್ಸೆ ನೀಡಲಾಗುತ್ತಿದೆ.