ಬೆಂಗಳೂರು : ಕರ್ನಾಟಕ ಸರ್ಕಾರವು ಆಂಧ್ರಪ್ರದೇಶಕ್ಕೆ ಇಂದು ನಾಲ್ಕು ಕುಮ್ಕಿ ಆನೆಗಳನ್ನು ಹಸ್ತಾಂತರಿಸುವ ಮೂಲಕ ಮಹತ್ವದ ಒಡಂಬಡಿಕೆಗೆ ಚಾಲನೆನೀಡಲಾಯ್ತು. ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರಾದ ಪವನ್ ಕಲ್ಯಾಣ್ ಅವರಿಗೆ ಪಳಗಿಸಿದ ನಾಲ್ಕು ಕುಮ್ಕಿ ಆನೆಗಳನ್ನು ಹಸ್ತಾಂತರಿಸಿದರು. ಈ ವೇಳೆ ಉಪಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್, ಸಚಿವರಾದ ಈಶ್ವರ ಖಂಡ್ರೆ, ಕೆ.ಜೆ ಜಾರ್ಜ್, ದಿನೇಶ್ ಗುಂಡೂರಾವ್, ಬೈರತಿ ಸುರೇಶ್ ಸೇರಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿತರರು ಹಾಜರಿದ್ದರು.
ಈ ವೇಳೆ ಮಹತ್ವದ ಒಡಂಬಡಿಕೆಗೆ ಸಹಿ ಹಾಕಿ ಆನೆಗಳನ್ನು ಹಸ್ತಾಂತರಿಸಲಾಯ್ತು, ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಅವರು ಆಂಧ್ರ ಸರ್ಕಾರದ ಪರವಾಗಿ ಸಹಿ ಹಾಕಿದರು. ಈ ಮೂಲಕ ಕಾಡಾನೆ ಸಂರಕ್ಷಣಾ ಚಟುವಟಿಕೆಗಳಲ್ಲಿ ಸಹಕಾರ ಮತ್ತು ಸಂಯುಕ್ತ ಕಾರ್ಯನೀತಿ ರೂಪಿಸುವ ನಿಟ್ಟಿನಲ್ಲಿ ಎರಡೂ ರಾಜ್ಯಗಳ ನಡುವೆ ಮತ್ತೊಂದು ಹೆಜ್ಜೆಗೆ ಮುಂದಾಗಿದೆ.
ಕುಮ್ಕಿ ಆನೆಗಳು, ಕಾಡಾನೆಗಳನ್ನು ನಿಯಂತ್ರಿಸುವ ಹಾಗೂ ನಿರ್ವಹಣೆಗೆ ಉಪಯೋಗವಾಗುವ ತರಬೇತುಗೊಂಡ ಆನೆಗಳಾಗಿವೆ. ಆಂಧ್ರಪ್ರದೇಶದ ಕಾಡುಗಳಲ್ಲಿ ಕಾಡಾನೆ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆ, ಈ ಆನೆಗಳು ಅರಣ್ಯ ಇಲಾಖೆಯ ಕಾರ್ಯಾಚರಣೆಗಳಿಗೆ ಸಹಾಯಕವಾಗಲಿವೆ. ಇಂದು ನಾಲ್ಕು ಕುಮ್ಕಿ ಆನೆಗಳನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಎರಡು ಆನೆಗಳನ್ನು ನೀಡಲಾಗುತ್ತದೆ.