ಶಿರಾ : ಕೂಸಿನ ಮನೆʼ ಯೋಜನೆಯಲ್ಲಿ ಲೂಟಿ? |ಅಧಿಕಾರಿಗಳ ವಿರುದ್ಧ ಆಕ್ರೋಶ

ಶಿರಾ : ಸರ್ಕಾರ ನರೇಗಾ ಯೋಜನೆಯಲ್ಲಿ ಗ್ರಾಮೀಣ ಭಾಗದ ಬಡವರಿಗೆ ಕೂಲಿ ಕೆಲಸವೇನೋ ಕೊಟ್ಟಿತ್ತು. ಕೂಲಿಗೆ ಹೋಗುವ ವೇಳೆಯಲ್ಲಿ ಮಕ್ಕಳನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಆ ಚಿಕ್ಕಪುಟ್ಟ ಮಕ್ಕಳು ಪೋಷಕರ ಜೊತೆ ಬಿಸಿಲಿನಲ್ಲಿಯೇ ಇರಬೇಕಾದಬೇಕಾದ ಪರಿಸ್ಥಿತಿ ಇತ್ತು. ಇದ್ರಿಂದ ಆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಇದನ್ನು ಅರಿತ ಸರ್ಕಾರ ʼಕೂಸಿನ ಮನೆʼ ಯೋಜನೆಯನ್ನು ಜಾರಿಗೊಳಿಸಿತು. ಆ ಮೂಲಕ ಕೂಲಿ ಕಾರ್ಮಿಕರ ಮಕ್ಕಳಿಗೆ ಆಶ್ರಯವನ್ನು ನೀಡಿತ್ತು. ಆದ್ರೆ, ಇಲ್ಲೊಂದು ತಾಲೂಕಿನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಕಟ್ಟಿಸಿರುವ ಕೂಸಿನ ಮನೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂದು ಹಳ್ಳ ಹಿಡಿದಿದೆ, ಕೆಲಸಕ್ಕೆ ಬಳಸುವ ವಸ್ತುಗಳನ್ನು ಹಾಕುವ ಗೋಡೌನ್‌ ಆಗಿ ಮಾರ್ಪಟ್ಟಿದೆ. 

ಹೌದು. ಕೂಸಿನ ಮನೆ ಹಳ್ಳ ಹಿಡಿದಿರುವುದು ಬೇರೆಲ್ಲೂ ಅಲ್ಲ ಶಿರಾ ತಾಲೂಕಿನ ನಾದೂರಿನಲ್ಲಿ.  ನರೇಗಾ ಕೆಲಸಕ್ಕೆ ಹೋಗುವ ಮಹಿಳೆಯರ ಮಕ್ಕಳನ್ನು ಪಾಲನೆ ಮಾಡಲು ಈ ಕೂಸಿನ ಮನೆಯನ್ನು ತೆರೆಯಲಾಗಿತ್ತು.  ರಾಜ್ಯ ಸರ್ಕಾರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನದಂತೆ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಈ ಕೂಸಿನ ಮನೆ ಯೋಜನೆಯನ್ನು ತೆರೆದಿದ್ರು. ಈ ಕೂಸಿನ ಮನೆಯನ್ನು ತೆರೆಯಲಾಗಿದೆ ಅಷ್ಟೆ ಆದ್ರೆ ಉಪಯೋಗಕ್ಕೆ ಬರ್ತಿಲ್ಲ. ಈ ಕೂಸಿನ ಮನೆ ಈಗ ಅಕ್ಷರಶಃ ತುಕ್ಕು ಹಿಡಿದೆ.  ಇತ್ತ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಕೂಸಿನ ಮನೆ ಇಂದು ಉಪಯೋಗಕ್ಕೆ ಬಾರದೆ ಪಾಳು ಬಿದ್ದ ಬಂಗಲೆಯಂತಾಗಿ, ಹಳೆಯ ವಸ್ತುಗಳ ಸಂಗ್ರಹಾಲಯವಾಗಿದೆ. ಮತ್ತೊಂದು ಕಡೆ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಾಡಾಗುತ್ತಿದೆ ಅನ್ನೋ ಮಾತು ಕೇಳಿಬರ್ತಿದೆ.

ಇತ್ತ ನಾದೂರಿನಲ್ಲಿರುವ ಕೂಸಿನ ಮನೆ ಯೋಜನೆಯು ಉಪಯೋಗಕ್ಕೆ ಬರುತ್ತಿಲ್ಲ. ಪ್ರಾರಂಭವಾಗಿ ತಿಂಗಗಳು ಕಳೆದರು ಕೂಡ ಯಾವೊಬ್ಬ ಅಧಿಕಾರಿಯು ಇತ್ತ ಬಂದಿಲ್ಲ. ಪರಿಶೀಲನೆ ಮಾಡಿಲ್ಲ ಅನ್ನೋ ಆರೋಪ ಕೇಳಿಬರ್ತಿದೆ.  ಇಂತಹ ಸ್ಥಳದಲ್ಲಿ ಅಧಿಕಾರಿಗಳು ಬೇಕಾಬಿಟ್ಟಿ ಅಂಕಿ ಅಂಶಗಳನ್ನು ತೋರಿಸಿ ಹಣ ಲೂಟಿ ಮಾಡುತ್ತಿದ್ದಾರೆ ಅಂತ ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಅಧಿಕಾರಿಗಳು ಭೇಟಿ ನೀಡದೆ ಕೂಲಿ ಕಾರ್ಮಿಕರು ಮತ್ತು ಮಕ್ಕಳ ಅಂಕಿ ಅಂಶಗಳನ್ನು ತೋರಿಸುತ್ತಿದ್ದಾರೆ ಅನ್ನೋ ಆರೋಪ ಕೇಳಿಬರ್ತಿದೆ. ಮತ್ತೊಂದು ಕಡೆ ಈ ಇಂತಹ ಕೂಸಿನ ಮನೆಗಳನ್ನು ಅಂಗನವಾಡಿ ಕೇಂದ್ರಗಳಿಗೆ ಸೇರಿಸುವ ಮೂಲಕ ಅಂಗನವಾಡಿ ಕೇಂದ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಬಹುದು ಎಂದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಹಳ್ಳ ಹಿಡಿಯುತ್ತಿರುವ ನಾದೂರಿನ ಕೂಸಿನ ಮನೆಗ ಮುಕ್ತಿ ನೀಡುವ ಕೆಲಸ ಮಾಡಬೇಕಾಗಿದೆ.

 

Author:

...
Keerthana J

Copy Editor

prajashakthi tv

share
No Reviews