ಮಧುಗಿರಿ:
ಮಧುಗಿರಿ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಲೋಕಾಯುಕ್ತ ವತಿಯಿಂದ ಕುಂದು ಕೊರತೆ ಸಭೆಯನ್ನ ಏರ್ಪಡಿಸಲಾಗಿತ್ತು. ಈ ವೇಳೆ ಸಾರ್ವಜನಿಕರ ಕೆಲಸ ಕಾರ್ಯಗಳು ಸರಿಯಾಗಿ ಆಗದೇ ಅಧಿಕಾರಗಳ ಬೇಜವಾಬ್ದಾರಿತನ, ನಿರ್ಲಕ್ಷ್ಯ ಎದ್ದು ಕಾಣಿಸಿತು. ಜೊತೆಗೆ ಸಭೆಯ ಬಗ್ಗೆ ಅಧಿಕಾರಿಗಳು ಸರಿಯಾದ ಪ್ರಚಾರ ನೀಡಿ ಸಾರ್ವಜನರಿಕರಿಗೆ ಮಾಹಿತಿ ತಿಳಿಸದೇ ಇದ್ದುದರಿಂದ, ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿರಲಿಲ್ಲ. ಹೀಗಾಗಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಎಸ್‌ಪಿ ಲಕ್ಷ್ಮೀನಾರಾಯಣ್ ಅಸಮಾಧಾನ ಹೊರಹಾಕಿದರು.
ಸಭೆಯಲ್ಲಿ ಕನಿಷ್ಟ 10 ದೂರು ಕೂಡ ಬಂದಿಲ್ಲ. ಯಾಕೆ ಸಾರ್ವಜನಿಕರಿಗೆ ಮಾಹಿತಿ ನೀಡಿಲ್ಲವೇ ಎಂದು ತಾಲೂಕು ಪಂಚಾಯ್ತಿ ಇಒ ಅವರನ್ನ ಪ್ರಶ್ನಿಸಿದ್ರು, ಇಲಾಖೆಯ ಎಲ್ಲಾ ಕಚೇರಿಗಳಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲು ಸಮಗ್ರ ಮಾಹಿತಿ ಒಳಗೊಂಡ ಮಾಹಿತಿ ಹಾಕಬೇಕಿದ್ದು, ಶೇ 90 ರಷ್ಟು ಇಲಾಖೆಗಳು ಹಾಕಿಲ್ಲ, ಅಲ್ದೇ ಸಾರ್ವಜನಿಕರ ಅರ್ಜಿಗಳನ್ನ ಅಂದೇ ವಿಲೇವಾರಿ ಮಾಡಿದ್ರೆ ಅರ್ಧ ಕೆಲಸ ಮುಗಿಯುತ್ತೆ. ಆದ್ರೆ ನೀವು ಬೇಕೆಂದೇ ತಡ ಮಾಡಿ ಅರ್ಜಿ ವಜಾ ಮಾಡಲು ಕಾರಣ ಹುಡುಕುತ್ತೀರಿ ಅಂತ ಅಧಿಕಾರಿಗಳ ಮೇಲೆ ಬೇಸರ ವ್ಯಕ್ತಪಡಿಸಿದ್ರು. ಇನ್ಮುಂದೆ ಯಾವ ಕಚೇರಿಯಲ್ಲಿ ನಾಮಫಲಕ ಇರಲ್ವೋ ಅಂದೇ ಭೇಟಿ ನೀಡಿ ಸ್ಥಳದಲ್ಲೇ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ತಹಶೀಲ್ದಾರ್ ಕಚೇರಿ ಆವರಣದ ಮಳಿಗೆಗಳ ಬಗ್ಗೆಯೂ ಚರ್ಚೆ ನಡೆಸಿದ್ದು ಈ ಬಗ್ಗೆ ಕ್ರಮವಹಿಸುವಂತೆ ತಹಶೀಲ್ದಾರ್ ಗೆ ಸೂಚಿಸಿದಾಗ ಈ ಬಗ್ಗೆ ದೂರು ಬಂದಿದ್ದು ಮೇಲಾಧಿಕಾರಿಗೆ ಮಾಹಿತಿ ನೀಡಿ ದೂರನ್ನು ವಿಲೇವಾರಿ ಮಾಡಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.
ಇನ್ನು ಲೋಕಾಯುಕ್ತ ಉಪ ಅಧೀಕ್ಷಕ ವೆಂಕಟೇಶ್ ಮಾತನಾಡಿ, ಸರ್ಕಾರಿ ಅಧಿಕಾರಿಗಳು, ನೌಕರರು, ಅರೆಕಾಲಿಕ ನೌಕರರೆಲ್ರೂ ಕೂಡ ಪ್ರತಿನಿತ್ಯ ಕಚೇರಿ ಬಂದಾಗ ಮತ್ತು ಹೊರಗೆ ಹೋಗುವಾಗ ಮೂವ್ ಮೆಂಟ್ ರಿಜಿಸ್ಟರ್ ಪಾಲಿಸಬೇಕು. ಅಲ್ದೇ ಅವರ ಜೇಬಲ್ಲಿದ್ದ ಹಣ ಕಚೇರಿ ಒಳಗೆ ಮತ್ತು ಹೊರಗೆ ಬಂದು ಹೋಗುವಾಗ ಎಷ್ಟಿತ್ತು ಎಂದು ನಗದು ವಹಿ ಪುಸ್ತಕವನ್ನು ಬರೆಯಬೇಕು ಎಂದ್ರು. ಅಧಿಕಾರಿಗಳು ಸೇರಿದಂತೆ ಕೆಲಸ ಮಾಡೋ ಯಾರು ಕೂಡ ಗುರುತಿನ ಚೀಟಿ ಹಾಕಿಕೊಂಡಿರಲ್ಲ, ನಿಮ್ಮ ಟೇಬಲ್ ಮುಂದೆ ನಿಮ್ಮ ಹೆಸರು ಹಾಗೂ ಸ್ಥಾನದ ಬಗ್ಗೆಯೂ ಮಾಹಿತಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಮಧುಗಿರಿಯಲ್ಲಿ ನಡೆದ ಲೋಕಾಯುಕ್ತ ಕುಂದುಕೊರತೆ ಸಭೆಯಲ್ಲಿಯೂ ಅಧಿಕಾರಿಗಳ ನಿರ್ಲಕ್ಷ್ಯತನ ಎದ್ದು ಕಾಣಿಸಿದ್ದು, ಲೋಕಾಯುಕ್ತ ಅಧಿಕಾರಿಗಳೇ ಬೇಸರಪಡುವಂತಾಗಿದ್ದು ಮಾತ್ರ ಸತ್ಯ.