ಶಿರಾ : ಮೂರು ಗಂಟೆಗಳ ಕಾಲ ಕೆಸರಿನಲ್ಲಿ ಸಿಲುಕಿಕೊಂಡ KSRTC ಬಸ್‌

ಶಿರಾ : ಸುಮಾರು 25 ಪ್ರಯಾಣಿಕರು ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಕಾಮಗಾರಿ ನಡೆಯುತ್ತಿದ್ದ ರಸ್ತೆಯ ಕೆಸರಿನಲ್ಲಿ ಸಿಲುಕಿಕೊಂಡು ಸುಮಾರು 3 ಗಂಟೆಗಳ ಕಾಲ ಪ್ರಯಾಣಿಕರು ಪರದಾಡಿದ ಘಟನೆ ಶಿರಾ ತಾಲ್ಲೂಕು ಹುಲಿಕುಂಟೆ ಹೋಬಳಿ ಬಸವನಹಳ್ಳಿ ಹಾಗೂ ಕೆ ಕೆ ಪಾಳ್ಯದ ಮಧ್ಯೆ ನಡೆದಿದೆ.

ಹೌದು, ಬಸವನಹಳ್ಳಿ ಹಾಗೂ ಕೆ ಕೆ ಪಾಳ್ಯ ಮಧ್ಯೆ ಸೇತುವೆ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಯ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಅನ್ನೋ ಆರೋಪ ಕೂಡ ಕೇಳಬಿರ್ತಿದೆ.  ಈ ಕಾರಣಕ್ಕೆ ಇಲ್ಲಿ ಸಂಚರಿಸುವ ಎಷ್ಟೋ ಗಾಡಿಗಳು ಕೆಸರಿನಲ್ಲಿ ಸಿಲುಕಿಕೊಂಡು ಪರದಾಡುವಂತಾಗುತ್ತಿದೆ ಎನ್ನಲಾಗಿದೆ. ಹಳೆಯ ಸೇತುವೆ ಕಿತ್ತುಹಾಕಿ ಈ ಸ್ಥಳದಲ್ಲಿ ಹೊಸ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಈ ಕಾರಣಕ್ಕೆ ಪಕ್ಕದಲ್ಲಿ ಬದಲಿ ರಸ್ತೆಯನ್ನು ನಿರ್ಮಿಸಲಾಗಿದೆ. ಆ ರಸ್ತೆಯು ಕೂಡ ಗುಂಡಿಗಳಿಂದ ತುಂಬಿ ತುಳುಕುತ್ತಿದೆ. ಈ ಸೇತುವೆ ವಿಚಾರವಾಗಿ ಗುತ್ತಿಗೆದಾರರು ಮತ್ತು ಉಸ್ತುವಾರಿ ಇಲಾಖೆಯ ನಿರ್ಲಕ್ಷ ತೋರಿದ ಹಿನ್ನಲೆ ಮಳೆ ನೀರು ನಿಂತು ರಸ್ತೆ ಕೆಸರುಗದ್ದೆಯಾಗಿದೆ. ಇದೇ ಕಾರಣಕ್ಕೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿ ಇಲ್ಲಿ ಸಂಚರಿಸುವ ಪ್ರಯಾಣಿಕರು ಜೀವಭಯದಲ್ಲಿ ಸಂಚರಿಸುವಂತಾಗಿದೆ.

ಇನ್ನು ನಿನ್ನೆ ರಾತ್ರಿ ಇದೇ ರಸ್ತೆಯಲ್ಲಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಕೆಸರಿನಲ್ಲಿ ಸಿಲುಕಿಕೊಂಡಿತ್ತು. ಮುಂದೆ ಹೋಗಲು ಪರದಾಡುತ್ತಿದ್ದ ಹಿನ್ನಲೆ ಸ್ಥಳೀಯರೇ ಬಂದು ಕೆಎಸ್‌ಆರ್‌ಟಿಸಿ ಬಸ್‌ ಸುಗಮ ಸಂಚಾರಕ್ಕೆ ಸಹಕಾರ ನೀಡಿದ್ರು. ಇದೇ ರಸ್ತೆಯಲ್ಲಿಯೇ ಹಲವಾರು ಇಲಾಖೆಯ ಅಧಿಕಾರಿಗಳು ಓಡಾಡುತ್ತಿದ್ದಾರೆ. ಆದ್ರೆ ಯಾರೋಬ್ಬರು ಕೂಡ ಈ ಆಮೆಗತಿಯ ಕಾಮಗಾರಿ ಬಗ್ಗೆ ಚಕಾರವೆತ್ತುತ್ತಿಲ್ಲ. ಅಧಿಕಾರಿಗಳ ನಿರ್ಲಯಕ್ಷ್ಯಕ್ಕೆ ಈ ಸೇತುವೆ ಕಾಮಗಾರಿ ಹಳ್ಳ ಹಿಡಿಯುತ್ತಿದೆ ಎನ್ನಲಾಗಿದೆ. ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿಯ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತ ಈ ಸೇತುವೇ ಕಾಮಗಾರಿ ಅವೈಜ್ಞಾನಿಕವಾಗಿ ಕೂಡಿದ್ದು, ಮಳೆ ಬಂದರೆ ಈ ಸ್ಥಳ ಸಂಪೂರ್ಣ ಕೆಸರು ಗದ್ದೆಯಾಗಿ ಮಾರ್ಪಟ್ಟು, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಹಗಲು ಹೊತ್ತಿನಲ್ಲಿ ಹೇಗಾದರೂ ಪ್ರಯಾಣಿಸುವ ಜನರು, ರಾತ್ರಿ ವೇಳೆ ಇಲ್ಲದ ತೊಂದರೆಗಳನ್ನು ಅನುಭವಿಸುತ್ತಾರೆ. ಈ ಪರಿಸ್ಥಿತಿ ತಲೆದೋರಿ  ತಿಂಗಳು ಉರುಳುತ್ತಿದ್ದರೂ ಕಾಮಗಾರಿ ಮಾತ್ರ ಪ್ರಗತಿ ಕಾಣದೆ ಪ್ರಯಾಣಿಕರು ಹೈರಾಣಾಗುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಮುಂದೆ ಆಗುವ ಅನಾವುತವನ್ನು ತಡೆಗಟ್ಟಬೇಕಿದೆ.

 

Author:

...
Keerthana J

Copy Editor

prajashakthi tv

share
No Reviews