ಪಾವಗಡ : ಬರದ ನಾಡು ಅಂತಾಲೇ ಕರೆಸಿಕೊಳ್ಳೋ ಪಾವಗಡದಲ್ಲಿ ಅಭಿವೃದ್ಧಿ ಅನ್ನೋದು ಕಾಣ್ತಾನೇ ಇಲ್ಲ ಅನ್ನೋ ಮಾತಿದೆ. ಇದಕ್ಕೆ ಪೂರಕವೆಂಬಂತೆ ತಾಲೂಕಿನ ಅದೆಷ್ಟೋ ಗ್ರಾಮಗಳಿಗೆ ಇಂದಿಗೂ ಸರಿಯಾದ ರಸ್ತೆಯಿಲ್ಲ. ಇನ್ನು ರಸ್ತೆ ಇದ್ದರೂ ಬಸ್ ವ್ಯವಸ್ಥೆಯಿಲ್ಲ. ಈ ಕಾರಣಕ್ಕೆ ಸರಿಯಾದ ಸಮಯಕ್ಕೆ ಬಸ್ಗಳು ಬರದೆ ಜನರು ಪರದಾಡುವಂತಾಗಿದೆ. ನಗರದ ಬಸ್ ನಿಲ್ದಾಣದಲ್ಲಿಯೂ ಇದೇ ಗೋಳಿದ್ದು, ಬಸ್ಗಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಾವಗಡ ತಾಲ್ಲೂಕಿನ ಗಡಿಭಾಗದ ಅನೇಕ ಗ್ರಾಮಗಳಿಗೆ ಇಂದಿಗೂ ಸಾರಿಗೆ ಸಂಪರ್ಕವಿಲ್ಲ. ಸಾರಿಗೆ ಇಲಾಖೆಯ ಪ್ರಕಾರ ಬಸ್ ಗಳು ಗ್ರಾಮಗಳಿಗೆ ಸಂಚರಿಸುತ್ತಿಲ್ಲ. ಇದರಿಂದ ಹಲವು ಗ್ರಾಮದ ಜನರು, ವಿದ್ಯಾರ್ಥಿಗಳು, ಉದ್ಯೋಗಿಗಳು, ಶಿಕ್ಷಕರು ತಾಲೂಕು ಕೇಂದ್ರ ತಲುಪಲು ಪರದಾಡುತ್ತಿದ್ದಾರೆ. ಪಾವಗಡಕ್ಕೆ ಬರಲು ಇಲ್ಲವೇ ಪಾವಗಡದಿಂದ ತಮ್ಮ ಗ್ರಾಮಗಳಿಗೆ ತೆರಳಲು ಜನರು ದ್ವಿಚಕ್ರ ವಾಹನ, ಆಟೋ, ಟೆಂಪೊ, ಲಗೇಜ್ ಆಟೋ, ಟ್ರ್ಯಾಕ್ಟರ್ ಮುಂತಾದ ಖಾಸಗಿ ವಾಹನಗಳನ್ನೇ ಅವಲಂಬಿಸುವಂತಾಗಿದೆ. ಇಂತಹ ವಾಹನ ಸಂಚಾರದಿಂದ ಅಪಘಾತಗಳು ಸಂಭವಿಸಿರುವ ಉದಾಹರಣೆಗಳಿವೆ.
ಇತ್ತೀಚೆಗೆ ತಾನೇ ಚಿತ್ರದುರ್ಗ ಲೋಕಾಸಭಾ ಕ್ಷೇತ್ರದ ಸಂಸದ ಗೋವಿಂದ ಕಾರಜೋಳ ಪಾವಗಡಕ್ಕೆ ಭೇಟಿ ನೀಡಿದ್ದರು. ಈ ವೇಳೆ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಸಮಾಲೋಚನಾ ಸಭೆಯನ್ನು ನಡೆಸಿ, ಬಸ್ ಸಮಸ್ಯೆಯ ಕುರಿತಾಗಿ ಆಲಿಸಿದ ಅವರು, ಬಸ್ ಘಟಕಗಳ ಕಾರ್ಯಾಚರಣೆಯ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದರು. ಆದರೆ ಕೆಎಸ್ಆರ್ಟಿಸಿ ಹೊರಡಿಸಿರುವ ಆದೇಶದಂತೆ ತಾಲೂಕಿನಲ್ಲಿ ಬಸ್ಗಳು ಸಂಚರಿಸುತ್ತಿಲ್ಲ ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಎಸ್ಆರ್ಟಿಸಿ ಹೊರಡಿಸಿರುವ ಆದೇಶದಂತೆ ಪಾವಗಡದಲ್ಲಿ 45 ಬಸ್ ಘಟಕಗಳಿದ್ದು, ಒಟ್ಟು 140 ಸಿಬ್ಬಂದಿಗಳು ಕಾರ್ಯ ನಿರ್ಹಿಸುತ್ತಿದ್ದಾರೆ. ಪಾವಗಡದಿಂದ ಇತರೆ ತಾಲೂಕು, ಜಿಲ್ಲೆ ಮತ್ತು ಗ್ರಾಮಗಳಿಗೆ ಚಲಿಸಲು ಜನರಿಗೆ ಕೇವಲ 41 ಬಸ್ ಗಳು ಮಾತ್ರ ಇವೆ. ಬೇರೆ ಜಿಲ್ಲೆಗೆ ತಲುಪುವುದಿರಲಿ ತಾಲೂಕಿನ ಹಲವು ಗ್ರಾಮಗಳಿಗೆ ಓಡಾಡಲು ಬಸ್ ವ್ಯವಸ್ಥೆ ಇಲ್ಲ. ಇದಲ್ಲದೇ ಸಂಜೆ ಆರೂವರೆ ಬಳಿಕ ಪಾವಗಡ ಕಡೆ ತೆರಳಲು ತುಮಕೂರಿನಿಂದ ಬಸ್ಗಳು ಸಿಗಲ್ಲ. ಇತ್ತ ಪಾವಗಡದಿಂದ ತುಮಕೂರಿನ ಕಡೆ ತೆರಳಲು ಕೂಡ 6 ಗಂಟೆ ಬಳಿಕ ಬಸ್ಗಳು ಇಲ್ಲ. ಇದರಿಂದ ಅನಾರೋಗ್ಯ ಮತ್ತಿತ್ತರ ತುರ್ತು ಸಂದರ್ಭಗಳಲ್ಲಿ ತೆರಳಲು ಬಸ್ಗಳು ಇಲ್ಲದೇ ಪರದಾಡುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕ್ತಿದ್ದಾರೆ.
ಇನ್ನು ಬಸ್ ಇಲ್ಲದೆ ವಿದ್ಯಾರ್ಥಿಗಳು ಒಂದು ಕಡೆ ಪರದಾಡುತ್ತಿದ್ದರೆ. ಮತ್ತೊಂದು ಕಡೆ ಶಿಕ್ಷಕರು ಗ್ರಾಮಗಳ ಶಾಲೆಗಳಿಗೆ ಹೋಗಲು ಹಿಂದೆಟು ಹಾಕುತ್ತಿದ್ದಾರೆ ಎನ್ನಲಾಗ್ತಿದೆ. ಅಲ್ಲಿಂದ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಇತ್ತ ಮಹಿಳೆಯರಿಗೆ ಸಿಗುತ್ತಿರುವ ಉಚಿತ ಬಸ್ ವ್ಯವಸ್ಥೆ ತಾಲೂಕಿನಲ್ಲಿ ಸಂಪೂರ್ಣ ನೆಲಕಚ್ಚಿದೆ ಎನ್ನಬಹುದು.