ಶಿರಾ :
ಶಿರಾದಲ್ಲಿ ಬೆಳಗ್ಗೆಯಿಂದಲೇ ಬಿರು ಬಿಸಿಲಿತ್ತು. ಬಿಸಿಲಿನ ತಾಪಕ್ಕೆ ಜನರು ಹೈರಾಣಾಗಿದ್ದರು. ಆದರೆ ಸಂಜೆ ಸಣ್ಣದಾಗಿ ಶುರುವಾದ ಮಳೆ 7 ರ ನಂತರ ಭರ್ಜರಿಯಾಗಿ ಸುರಿಯಿತು. ಕಳೆದ ಹಲವು ದಿನಗಳಿಂದ ಅಕ್ಷರಶಃ ಅಗ್ನಿಕುಂಡವಾಗಿದ್ದ ನಗರದಲ್ಲಿ ನಿನ್ನೆ ಸುರಿದ ಮಳೆ ಕೊಂಚ ತಂಪೆರೆದಿತು. ಆದರೆ ಸುರಿದ ಮಳೆ ಅಷ್ಟೇ ಅವಾಂತರವನ್ನು ಸೃಷ್ಠಿ ಮಾಡಿ ಜನರು ಪರದಾಡುವಂತೆ ಮಾಡಿತು.
ಶಿರಾ ಸೇರಿದಂತೆ ತಾಲೂಕಿನ ವಿವಿಧ ಕಡೆ ಕೃತಿಕಾ ಮಳೆ ಆರಂಭವಾಗಿದೆ. ರಾತ್ರಿ ಸುರಿದ ಮಳೆಯಿಂದಾಗಿ ಒಂದೆಡೆ ತಂಪಾದರೆ ಮತ್ತೊಂದೆಡೆ ರಸ್ತೆಯಲ್ಲಿ ನಿಂತ ನೀರಿನಿಂದ ಜನ ಸಂಚರಿಸಲು ಪರದಾಡುವಂತಾಯಿತು. ಗುಡುಗು, ಮಿಂಚು, ಸಿಡಿಲು ಸಮೇತ ಸುರಿಯಲು ಆರಂಭಿಸಿದ ಮಳೆಯಿಂದಾಗಿ ಕೆಲಹೊತ್ತಿನಲ್ಲೇ ಅವಾಂತರ ಸೃಷ್ಟಿಯಾಯಿತು. ರಭಸದ ಮಳೆಯಿಂದಾಗಿ ನಗರದಲ್ಲಿನ ಬಹುತೇಕ ಚರಂಡಿಗಳು ತುಂಬಿ ಅದರಲ್ಲಿನ ಕೊಳಚೆಯೆಲ್ಲ ರಸ್ತೆ ಮೇಲೆ ಹರಿಯಲಾರಂಭಿಸಿತು. ವಾಹನ ಸವಾರರು ಈ ಕೊಳಚೆಯಲ್ಲಿ ಸಂಚರಿಸಲು ಹರಸಾಹಸ ಪಡುವಂತಾ ಯಿತು.
ಇನ್ನು ಸಂಜೆ ಮಾರುಕಟ್ಟೆಗೆ ಬಂದಿದ್ದ ಜನರಿಗೆ ಈ ದಿಢೀರ್ ಮಳೆ ಶಾಕ್ ನೀಡಿತ್ತು. ಸಣ್ಣದಾಗಿ ಪ್ರಾರಂಭವಾದ ಮಳೆ ಹೆಚ್ಚಾಗುತ್ತ ಹೋಯ್ತು. ಇದರಿಂದ ಜನರು ಮಾರುಕಟ್ಟೆಯ ಅಂಗಡಿಗಳ ಮುಂದೆ ಕೆಲಕಾಲ ಆಶ್ರಯ ಪಡೆದ್ರು. ಇನ್ನು ಕೆಲವರು ಮಳೆ ನಿಲ್ಲುವುದಿಲ್ಲ ಎಂಬ ಭಯದಲ್ಲಿ ಮಳೆಯಲ್ಲಿಯೇ ನೆನೆಯುತ್ತ ತಮ್ಮ ಮನೆಗಳಿಗೆ ತೆರಳಿದರು.