ಕೊರಟಗೆರೆ:
ಕೊರಟಗೆರೆ ತಾಲೂಕು ಕಸಬಾ ಹೋಬಳಿಯ ಕೆರೆಯಾಗಳಹಳ್ಳಿಯಲ್ಲಿ ಅಡಿಕೆ ಗೊನೆ ಕಳ್ಳತನ ಮಾಡುತ್ತಿದ್ದ, ಅಣ್ಣ ತಮ್ಮ ಇಬ್ಬರನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದು. ಆರೋಪಿಗಳ ವಾಹನ ಮತ್ತು ಸುಮಾರು 25ಕೆಜಿ ಅಡಿಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೌದು ಗ್ರಾಮದ ರಮೇಶ್ ಎಂಬುವರ ತೋಟದಲ್ಲಿ ಇತ್ತೀಚೆಗೆ 110 ಅಡಿಕೆ ಮರದಲ್ಲಿ ಸುಮಾರು 50 ಸಾವಿರ ಮೌಲ್ಯದ ಅಡಿಕೆ ಗೊನೆಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಪಿಟ್ಲಾಲಿ ಗ್ರಾಮದ ಶಿವಕುಮಾರ್ ಮತ್ತು ಸಂತೋಷ್ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಆರೋಪಿಗಳಿಬ್ಬರು ವ್ಯಾಪಾರಕ್ಕೆಂದು ಕೊರಟಗೆರೆಯ ಚುಂಚೇನಹಳ್ಳಿ ಗ್ರಾಮದಲ್ಲಿ 5 ವರ್ಷದಿಂದ ವಾಸವಾಗಿದ್ದರು, ಆದರೆ ಇವರು ಹಗಲಿನಲ್ಲಿ ಎಳನೀರು ವ್ಯಾಪಾರ ಮಾಡ್ತಿದ್ದು, ರಾತ್ರಿ ಆದರೆ ಸಾಕು ಮತ್ತೇ ಅದೇ ತೋಟಕ್ಕೆ ನುಗ್ಗಿ ಕಳ್ಳತನ ಮಾಡ್ತಿದ್ದರು ಎಂದು ತಿಳಿದುಬಂದಿದೆ.
ಇನ್ನು ಘಟನೆ ಸಂಬಂಧ ದಾಖಲಾಗಿದ್ದ ಪ್ರಕರಣ ಬೇಧಿಸುವಲ್ಲಿ ಕೊರಟಗೆರೆ ಪಿಎಸೈ ಚೇತನಕುಮಾರ್ ನೇತೃತ್ವದ ಪೊಲೀಸರ ತಂಡ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗ್ತಿದ್ದು, ಇನ್ನಾದರೂ ರೈತರು ತಮ್ಮ ತೋಟಕ್ಕೆ ಬರುವ ಅಪರಿಚಿತರ ಬಗ್ಗೆ ಎಚ್ಚರವಹಿಸಬೇಕು, ಇಲ್ಲವಾದರೆ ಕಳ್ಳತನವಾಗಿರುವ ಮಾಹಿತಿ ತಿಳಿಯುವಷ್ಟರಲ್ಲಿ ಕಳ್ಳರು ಊರನ್ನೇ ಬಿಟ್ಟಿರುತ್ತಾರೆ ಅಷ್ಟೇ.