ಕರ್ನಾಟಕ : ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದಿನಿಂದ ಮೇ 22ರವರೆಗೆ ರಾಜ್ಯದ ಕರಾವಳಿ, ಮಲೆನಾಡು ಹಾಗೂ ಕೆಲ ಭಾಗಗಳಲ್ಲಿ ಗಂಟೆಗೆ 40ರಿಂದ 50 ಕಿ.ಮೀ ವೇಗದ ಗಾಳಿ ಮತ್ತು ಧಾರಾಕಾರ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ ನಾಲ್ಕು ದಿನಗಳಲ್ಲಿ ಭಾರೀ ಗಾಳಿ ಮಳೆಯ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಮತ್ತು ಮೀನುಗಾರರು ಎಚ್ಚರಿಕೆಯಿಂದಿರುವಂತೆ ಇಲಾಖೆ ಸಲಹೆ ನೀಡಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರೀ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಮೈಸೂರು, ಹಾಸನ, ಕೊಡಗು, ಬೆಳಗಾವಿ, ಬೀದರ್, ರಾಯಚೂರು, ಯಾದಗಿರಿ, ದಾವಣಗೆರೆ, ಚಿತ್ರದುರ್ಗ ಹಾಗೂ ಕರಾವಳಿ, ಮಲೆನಾಡು ಭಾಗಕ್ಕೆ ಅಲರ್ಟ್ ಘೋಷಿಸಲಾಗಿದೆ.
ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತಗಳು ಹಾಗೂ ವಿಪತ್ತು ನಿರ್ವಹಣಾ ತಂಡಗಳನ್ನು ಸಜ್ಜುಗೊಳಿಸಲಾಗಿದ್ದು, ತುರ್ತು ಸಹಾಯವಾಣಿಯೂ ಕಾರ್ಯ ನಿರತವಾಗಿದೆ.