ತುಮಕೂರು : ಸ್ಮಾರ್ಟ್ ಸಿಟಿ ಖ್ಯಾತಿಗೆ ಪಾತ್ರವಾಗಿರೋ ತುಮಕೂರು ನಗರ ಕುಡುಕರ ಅಡ್ಡೆಯಾಗಿ ಬದಲಾಗ್ತಿದ್ಯಾ ಅನ್ನೋ ಅನುಮಾನ ಮೂಡೋದಕ್ಕೆ ಶುರುವಾಗಿದೆ. ಕಾರಣ ಏನಪ್ಪಾ ಅಂದರೆ, ಇಷ್ಟು ದಿನ ಕುಡುಕರು ವೈನ್ ಶಾಪ್, ಬಾರ್ ಅಥವಾ ಇನ್ಯಾವುದೋ ಸೀಕ್ರೇಟ್ ಪ್ಲೇಸ್‌ನಲ್ಲಿ ಎಣ್ಣೆ ಹೊಡೆದು ಕಿಕ್ಕೆರಿಸಿಕೊಳ್ತಿದ್ದರು. ಆದರೆ ಇದೀಗ ಜಿಲ್ಲೆಯ ಪವರ್ ಹೆಡ್ ಕ್ವಾರ್ಟರ್ ಅಂತಲೇ ಕರೆಸಿಕೊಳ್ಳೋ ಡಿಸಿ ಕಚೇರಿ ಮುಂಭಾಗವೇ ಕ್ವಾರ್ಟರ್ ಏರಿಸಿ ಪಾರ್ಟಿ ಮಾಡಿದರಾ ಅನ್ನೋ ಪ್ರಶ್ನೆ ಮೂಡ್ತಿದೆ.
ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರೇ ಕೆಲವು ಕಿಡಿಗೇಡಿಗಳು ರಾಜಾರೋಷವಾಗಿ ಭರ್ಜರಿ ಪಾರ್ಟಿ ಮಾಡಿದ್ದಾರೆ. ಡಿಸಿ ಕಚೇರಿ ಮುಖ್ಯ ದ್ವಾರದಿಂದ ಕೇವಲ ಹತ್ತಿಪ್ಪತ್ತು ಮೀಟರ್ ದೂರದಲ್ಲಿರೋ ಮರದ ಕಟ್ಟೆಯ ಮೇಲೆ ಯಾರೋ ಕಿಡಿಗೇಡಿಗಳು ಎಣ್ಣೆ ಹೊಡೆದು ಕಿಕ್ಕೇರಿಸಿಕೊಂಡಿದ್ದು, ಮಧ್ಯದ ಬಾಟಲಿಗಳನ್ನು ಅಲ್ಲಿಯೇ ಬಿಸಾಡಿ ಹೋಗಿದ್ದಾರೆ.
ಕಣ್ಣೆದುರೇ ಡಿಸಿ ಕಚೇರಿ ಇದೆ. ಈ ಕಡೆ ತಿರುಗಿದರೆ ಜಿಲ್ಲಾ ನ್ಯಾಯಾಲಯವಿದೆ. ಇನ್ನು ಕೂಗಳತೆ ದೂರದಲ್ಲಿಯೇ ಪೊಲೀಸ್ ಠಾಣೆಯಿದೆ, ಡಿವೈಎಸ್‌ಪಿ ಕಚೇರಿ ಕೂಡ ಸಮೀಪದಲ್ಲೇ ಇದೆ. ಆದರೆ ಈ ಕುಡುಕರು ಮಾತ್ರ ಸ್ವಲ್ಪವೂ ಭಯವಿಲ್ಲದೇ ಸರ್ಕಲ್ ಮಧ್ಯದಲ್ಲಿಯೇ ಇರೋ ಮರದ ಕಟ್ಟೆಯ ಮೇಲೆ ಕುಳಿತು ಪಾರ್ಟಿ ಮಾಡಿದ್ದಾರೆ. ತಡರಾತ್ರಿ ಮರದ ಕಟ್ಟೆಯ ಮೇಲೆ ಕುಳಿತು ಎಣ್ಣೆ ಪಾರ್ಟಿ ಮಾಡಿರುವ ಸಾಧ್ಯತೆಯಿದ್ದು, ಮರದ ಕಟ್ಟೆ ಮೇಲೆ ನಾಲ್ಕೈದು ಮಧ್ಯದ ಬಾಟಲಿಗಳು, ತಿಂದು ಬಿಸಾಡಿದ ಆಹಾರ ಪೊಟ್ಟಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿವೆ. ಇನ್ನು ಜಿಲ್ಲಾಧಿಕಾರಿ ಕಚೇರಿ ಎದುರೇ ಸ್ಮಾರ್ಟ್ ಸಿಟಿಯ ಸಿಸಿ ಟಿವಿ ಕ್ಯಾಮೆರಾಗಳು ಕೂಡ ಇವೆ. ಆದರೆ ಇದ್ಯಾವುದಕ್ಕೂ ಅಂಜದೇ ಪುಂಡರು ಪಾರ್ಟಿ ಮಾಡಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಇಂತಹ ಪ್ರಮುಖ ಸ್ಥಳದಲ್ಲಿ ಪಾರ್ಟಿ ಮಾಡಿದ ಮೋಜುಕೋರರಿಗೆ ತಕ್ಕ ಪಾಠ ಕಲಿಸಬೇಕಿದೆ.