ವಿಜಯನಗರ : ಗ್ಯಾರಂಟಿ ಹೆಸರಲ್ಲಿ ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ಪೂರೈಕೆಯಾದ ಹಿನ್ನೆಲೆ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಕಾಂಗ್ರೆಸ್ ಸಾಧನ ಸಮಾವೇಶವನ್ನು ಆಯೋಜನೆ ಮಾಡಲಾಗಿತ್ತು. ಸಾಧನಾ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸರ್ಕಾರದ ಎಲ್ಲಾ ಸಚಿವರು ಹಾಗೂ ಶಾಸಕರು, ಸಾವಿರಾರು ಮಂದಿ ಕಾರ್ಯಕರ್ತರು ಭಾಗಿಯಾಗಿದ್ದರು.
ಕಾಂಗ್ರೆಸ್ ಸಮಾವೇಶದಿಂದ ಹೊಸಪೇಟೆಯಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಅಲ್ಲದೇ ಬರೋಬ್ಬರಿ 1 ಲಕ್ಷದ 11 ಸಾವಿರದ ನೂರ ಹನ್ನೊಂದು ಮಂದಿ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ವಿತರಣೆ ಮಾಡಲಾಗಿದ್ದು, ರಾಹುಲ್ ಗಾಂಧಿ ಐದು ಮಂದಿ ಫಲಾನುಭವಿಗಳಿಗೆ ಡಿಜಿಟಲ್ ಹಕ್ಕು ಪತ್ರವನ್ನು ವಿತರಣೆ ಮಾಡಿದರು.
ಕರ್ನಾಟಕದಲ್ಲಿ ಅಬ್ಬರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹಕ್ಕು ಪತ್ರ ನೀಡುವುದರಲ್ಲಿ ಕರ್ನಾಟಕ ದೇಶದ ಮೊದಲ ರಾಜ್ಯವಾಗಬೇಕು. ಹಕ್ಕು ಪತ್ರ ನೀಡುವ ಮೂಲಕ ಆರನೇ ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದು ರಾಹುಲ್ ಗಾಂಧಿ ಘೋಷಣೆ ಮಾಡಿದರು. ಸಾಧನ ಸಮಾವೇಶದಲ್ಲಿ ಗ್ಯಾರಂಟಿ ಯೋಜನೆಗಳನ್ನು ಕೊಂಡಾಡಿದ ರಾಹುಲ್ ಗಾಂಧಿ, ನಾವು ಕೊಟ್ಟ ಗ್ಯಾರಂಟಿಯನ್ನು ಪೂರ್ಣ ಮಾಡೋದಿಲ್ಲ ಅಂತಾ ಬಿಜೆಪಿ ಕಾಲೆಳೆದಿತ್ತು. ಗ್ಯಾರಂಟಿ ಬಗ್ಗೆ ಪ್ರಧಾನಿ ಕೂಡ ಟೀಕಿಸಿದರು. ಆದರೆ ನಮ್ಮ ಸರ್ಕಾರ ಕೊಟ್ಟ ಗ್ಯಾರಂಟಿಯನ್ನು ಈಡೇರಿಸಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.
ಇನ್ನು ಈ ವೇಳೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಪಾಕಿಸ್ತಾನ ಹಾಗೂ ಭಾರತ ಯುದ್ಧದ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ ಸಾಧನ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರೋವರೆಗೆ ಗ್ಯಾರಂಟಿ ಸ್ಕೀಮ್ ನಿಲ್ಲೋದಿಲ್ಲ. ಬಡವರು ಹಕ್ಕು ಪತ್ರ ಇಲ್ಲದೇ ಪರದಾಟ ಮಾಡುವ ಜನರಿಗಾಗಿ ಈ ಕಾರ್ಯಕ್ರಮ. ಈ ಸ್ವತ್ತು ಮೂಲಕ ಏಳನೇ ಗ್ಯಾರಂಟಿ ಕೂಡ ನೀಡುತ್ತಿದ್ದೇವೆ ಎಂದು ಭರವಸೆ ನೀಡಿದ್ರು.
ಮಳೆಯ ನಡುವೆಯೇ ಕಾಂಗ್ರೆಸ್ ಸರ್ಕಾರದ ಸಮಾವೇಶ ನಡೆದಿದ್ದು, ಸಾವಿರಾರು ಮಂದಿ ಭಾಗಿಯಾಗಿದ್ದರು. ಹೊಸಪೇಟೆಯಲ್ಲಿ ಕಾಂಗ್ರೆಸ್ ನಾಯಕರು ಅಬ್ಬರಿಸುವ ಮೂಲಕ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟರು.