CRICKET :
ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಪುನಃ ಒಂದೇ ಒಂದು ದೊಡ್ಡ ಸುದ್ದಿ ಸಿಕ್ಕಿದೆ. ಭಾರತ ಮತ್ತು ಪಾಕಿಸ್ತಾನ್ ಯುದ್ಧದ ಭೀತಿಯ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18, ಮುಂದಿನ ವಾರವೇ ಮತ್ತೆ ಪ್ರಾರಂಭವಾಗಲಿದೆ ಎನ್ನುವ ಮಾಹಿತಿ ಇದೀಗ ಅಧಿಕೃತ ಮೂಲಗಳಿಂದ ಲಭ್ಯವಾಗಿದೆ.
ಬಿಸಿಸಿಐ ಮೂಲಗಳ ಪ್ರಕಾರ, ಮೇ 15 ಅಥವಾ 16ರಂದು ಐಪಿಎಲ್ ಪುನರಾರಂಭಗೊಳ್ಳುವ ಸಾಧ್ಯತೆ ಬಹಳ ಇದೆ. ಈ ನಿರ್ಧಾರ, ಭಾರತ ಮತ್ತು ಪಾಕಿಸ್ತಾನ್ ನಡುವೆ ನಿನ್ನೆ ಸಂಜೆ ನಡೆದ ಶಾಂತಿ ಮಾತುಕತೆ ಯಶಸ್ವಿಯಾಗಿ ಪೂರ್ಣಗೊಂಡ ನಂತರ ತೆಗೆದುಕೊಳ್ಳಲಾಗಿದೆ. ಉಭಯ ದೇಶಗಳು ಶಾಂತಿಯ ಪಥವನ್ನು ಅನುಸರಿಸಲು ಒಪ್ಪಿಗೆ ನೀಡಿದ ಬೆನ್ನಲ್ಲೇ, ಬಿಸಿಸಿಐ ಕೂಡಾ ತನ್ನ ಮುಂದಿನ ಯೋಜನೆಗಳನ್ನು ಸ್ಪಷ್ಟಪಡಿಸಿದೆ.
ಈಗಾಗಲೇ ನಿರ್ಧಾರವಾಗಿರುವಂತೆ, ಉಳಿದ ಎಲ್ಲಾ ಪಂದ್ಯಗಳನ್ನು ಭಾರತದಲ್ಲಿಯೇ ನಡೆಸಲಾಗುವುದು. ಆದರೆ, ಯುದ್ಧ ಭೀತಿಯ ಹಿನ್ನಲೆಯಲ್ಲಿ ಭದ್ರತಾ ಕಾರಣದಿಂದಾಗಿ ಧರ್ಮಶಾಲಾ ವೇದಿಕೆಯಿಂದ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು. ಇತ್ತೀಚೆಗಷ್ಟೇ, ಮೇ 9ರಂದು ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ಮಧ್ಯಂತರದಲ್ಲಿ ಸ್ಥಗಿತಗೊಳಿಸಲಾಗಿತ್ತು. ಆ ಸಂದರ್ಭದಲ್ಲೂ ಆತಂಕದ ವಾತಾವರಣವಿದ್ದು, ಅಭಿಮಾನಿಗಳು, ಆಟಗಾರರು ಹಾಗೂ ಕ್ರೀಡಾ ಸಿಬ್ಬಂದಿಗಳ ಸುರಕ್ಷತೆ ಮುಖ್ಯ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು.
ಈಗ, ಪುನಃ ಬಿಸಿಸಿಐ ಇಂದಿನಿಂದಲೇ ತಂತ್ರ ರೂಪಿಸಲು ಕಸರತ್ತು ಆರಂಭಿಸಿದೆ. ಪುನರಾರಂಭದ ಮೊದಲ ಪಂದ್ಯವೇ ಸ್ಥಗಿತಗೊಂಡಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವಾಗಲಿದೆ. ನಿಗದಿಯ ದಿನಾಂಕವನ್ನು ಬಿಸಿಸಿಐ ಬಹುತೇಕ ಮೇ 15 ಅಥವಾ 16ಕ್ಕೆ ಸ್ಥಿರಗೊಳಿಸಿದೆ.
ಇದರಿಂದಾಗಿ, ಐಪಿಎಲ್ ಅಭಿಮಾನಿಗಳಿಗೆ ಪುನಃ ಹಬ್ಬದ ಹರ್ಷವುಂಟಾಗಿದೆ. ಪ್ರತಿ ದಿನದ ಕ್ರೀಡಾ ರಸದೌತಣ ಮತ್ತೆ ಆರಂಭಗೊಳ್ಳಲಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ತಂಡಗಳ ಆಟವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.