ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ಐದಾರು ದಿನಗಳಿಂದ ಭಾರೀ ಮಳೆಯಾಗ್ತಿದ್ದು, ಜಿಲ್ಲೆಯಲ್ಲಿ ನಾನಾ ಅವಾಂತರಗಳನ್ನು ಸೃಷ್ಟಿ ಮಾಡಿದೆ. ಹಲವೆಡೆ ಮಳೆಗೆ ಫಸಲಿಗೆ ಬಂದ ಬೆಳೆ ನಾಶ ಆಗ್ತಾ ಇದ್ರೆ, ಕೆಲವು ಕಡೆ ಮನೆಗಳು ಕುಸಿಯಲಾರಂಭಿಸಿವೆ. ಅಲ್ದೇ ಮರಗಳು ಧರಶಾಯಿ ಆಗ್ತಾ ಇದ್ದು ಜನರು ತತ್ತರಿಸಿ ಹೋಗಿದ್ದಾರೆ,
ಚಿಕ್ಕಬಳ್ಳಾಪುರದಲ್ಲಿ ಸತತ ಮಳೆಯಿಂದ ಎರಡು ಕಡೆ ಮನೆಗಳು ಕುಸಿದಿವೆ. ಹೌದು ಸತತವಾಗಿ ಸುರಿಯುತ್ತಿರೋ ಮಳೆಯಿಂದಾಗಿ ಮನೆ ಕುಸಿತವಾಗಿದ್ದು, ಭಾರೀ ಅನಾಹುತ ತಪ್ಪಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿನ್ನಸಂದ್ರ ಗ್ರಾಮದಲ್ಲಿ ಮಳೆಯಿಂದಾಗಿ ಸೈಯದ್ ಅಜಾಜ್ ಎಂಬುವವರ ಮನೆ ಏಕಾಏಕಿ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ,, ಆದ್ರೆ ಮನೆಯಲ್ಲಿದ್ದ ವಸ್ತುಗಳು ನಾಶವಾಗಿದ್ದು ಕುಟುಂಬ ಕಂಗಾಲಾಗಿದೆ.
ಇತ್ತ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯಲ್ಲಿಯೂ ನಿರಂತರ ಮಳೆಯಿಂದಾಗಿ ಮನೆಯೊಂದು ಕುಸಿದಿದೆ. ಬಾಗೇಪಲ್ಲಿಯ ಋಆಮಸ್ವಾಮಿ ಪಲ್ಲಿ ಎಂಬ ಗ್ರಾಮದ ವೃದ್ಧೆ ಜಯಮ್ಮ ರೆಡ್ಡಿ ಎಂಬುವವರಿಗೆ ಸೇರಿದ ಮನೆಯ ಮೇಲ್ಛಾವಣಿ ಮಳೆಗೆ ಕುಸಿದಿದೆ. ಮನೆಗೆ ಕಲ್ಲು ಚಪ್ಪಡಿಯ ಮೇಲ್ಛಾವಣಿಯಾಗಿದ್ದು, ಕಲ್ಲು ಕುಸಿದು ವೃದ್ಧೆ ಜಯಮ್ಮ ಕಾಲಿಗೆ ಗಂಭೀರ ಗಾಯಗಳಾಗಿದ್ದು ಸದ್ಯ ಪ್ರಾಣಪಾಯದಿಂದ ಪಾರಾಗಿದ್ದಾರೆ. ಗಾಯಾಳು ಜಯಮ್ಮ ಅವರನ್ನು ಬಾಗೇಪಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಅಲ್ದೇ ಮನೆ ಕುಸಿದಿರೋದ್ರಿಂದ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣವಾಗಿ ನಾಶವಾಗಿದೆ,
ಇನ್ನು ಜಿಲ್ಲೆಯಲ್ಲಿ ಸುರಿಯುತ್ತಿರೋ ಮಳೆಯಿಂದಾಗಿ ಹಲವು ಬೆಳೆಗಳು ನೆಲಕಚ್ಚಿವೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ನಿಚ್ಚನಬಂಡಹಳ್ಳಿ ಗ್ರಾಮದ ರೈತ ವೆಂಕಟಪ್ಪರಾಯಪ್ಪ ಒಂದು ಎಕರೆ ಜಮೀನಿನಲ್ಲಿ ಚೆಂಡೂ ಹೂವನ್ನು ಬೆಳೆದಿದ್ರು. ಆದ್ರೆ ಕಳೆದ ಐದು ದಿನಗಳಿಂದ ಸುರಿಯುತ್ತಿರೋ ಭಾರೀ ಮಳೆಗೆ ಫಸಲಿಗೆ ಬಂದಿದ್ದ ಚೆಂಡು ಹೂ ಬೆಳೆ ನೆಲಕಚ್ಚಿದ್ದು, ಬೆಳೆ ನಿರಿಕ್ಷೆಯಲ್ಲಿದ್ದ ರೈತನಿಗೆ ಬರಸಿಡಿಲು ಬಡಿದಂತಾಗಿದೆ. ಬೆಳೆ ನಾಶಕ್ಕೆ ಸರ್ಕಾರ ಪರಿಹಾರ ಒದಗಿಸುವಂತೆ ರೈತ ವೆಂಕಟಪ್ಪರಾಯಪ್ಪ ಆಗ್ರಹಿಸಿದ್ರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ಸಾಕಷ್ಟು ಅವಾಂತರವಾಗಿದೆ, ಜಿಲ್ಲೆಯಲ್ಲಿ ಇನ್ನು ಎರಡು ಮೂರು ದಿನಗಳ ಕಾಲ ಮಳೆ ಆಗಲಿದ್ದು ಮಳೆ ಅವಾಂತರಗಳನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿರಬೇಕಿದೆ.