ಚಿಕ್ಕನಾಯಕನಹಳ್ಳಿ : ಈಗಿನ ಕಾಲದಲ್ಲಿ ಬಡವರ ಪರ ದನಿ ಎತ್ತೋದೆ ಬೇಡ ಅಂತಾ ಅನಿಸಿಬಿಟ್ಟಿದೆ, ಅವರ ಪರ ನಿಲ್ಲೋದು ಸಾಕು, ಅಧಿಕಾರಿಗಳಿಂದ ಬೈಸಿಕೊಳ್ಳೋದು ಸಾಲದೆಂಬಂತೆ ಬೆದರಿಕೆಯನ್ನೂ ಹಾಕಿಸಿಕೊಳ್ಳೋದು ಸಾಕು ಅಂತಾ ಅನಿಸಿಬಿಡುತ್ತೆ. ಆದ್ರೆ ಮನಸ್ಸು ಕೇಳಬೇಕಲ್ವಾ.. ಕಡು ಬಡವರ ಕಷ್ಟ ಕಂಡು ಮರುಗುವ ನಾವು ಅವರಿಗೆ ನಮ್ಮ ಕೈಲಿ ಏನನ್ನು ಮಾಡಲು ಆಗದಿದ್ರು ಅಟ್ ಲೀಸ್ಟ್ ಸರ್ಕಾರದಿಂದ ಆದ್ರು ಏನಾದ್ರು ಸೌಲಭ್ಯ ಸಿಗುವಂತೆ ಮಾಡೋಣ ಅಂತಾ ಅನಿಸುತ್ತೆ… ಬಡ ವೃದ್ಧೆಗೆ ಮೂಲಭೂತ ಸೌಕರ್ಯ ಒದಗಿಸಿ ಅಂತಾ ಲಾ ಓದ್ತಾ ಇದ್ದ ವಿದ್ಯಾರ್ಥಿ ಕೇಳಿದ್ದಕ್ಕೆ ಸ್ವತಃ ತಹಶೀಲ್ದಾರ್ ಅವರೇ ಕಾಲ್ ಮಾಡಿ ಬೆದರಿಕೆ ಹಾಕಿರೋ ಘಟನೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ಜಿಲ್ಲೆಯಲ್ಲೇ ನಡೆದಿದ್ದು, ಗೃಹ ಸಚಿವರ ಕ್ಷೇತ್ರದಲ್ಲೇ ಅಧಿಕಾರಿಗಳಿಗೆ ಕಾನೂನಿನ ಭಯ ಇಲ್ವಾ ಎಂಬ ಅನುಮಾನ ಶುರುವಾಗಿದೆ.
ಹೀಗೆ ಡಿಸಿ ಕಚೇರಿ ಮುಂದೆ ಮನವಿ ಪತ್ರ ಇಟ್ಟುಕೊಂಡು ನ್ಯಾಯಕ್ಕಾಗಿ ಮೊರೆ ಹಿಡುತ್ತಿರೋ ಯುವಕನ ಹೆಸರು ದೇವರಾಜ್ ಅಂತಾ.. ಚಿಕ್ಕನಾಯಕನಹಳ್ಳಿ ತಾಲೂಕಿನ ಶಿಡ್ಲೆಕಟ್ಟೆ ಗ್ರಾಮದ ಲಾ ಸ್ಟೂಡೆಂಟ್. ಚಿಕ್ಕನಾಯಕನಹಳ್ಳಿ ತಾಲೂಕಿನ ತೀರ್ಥಪುರ ಗ್ರಾಮದ ವೃದ್ದೆ ದೊಡ್ಡಮ್ಮನಿಗೆ ಕನಿಷ್ಠ ಮೂಲಭೂತ ಸೌಕರ್ಯ ಇಲ್ಲದೇ ಭಿಕ್ಷಾಟನೆ ಮಾಡಿಕೊಂಡು ಆಕೆ ಹಾಗೂ ಮೊಮ್ಮಗ ಜೀವನ ದೂಡುತ್ತಿದ್ದು, ಇವರಿಗೆ ಮೂಲಭೂತ ಸೌಕರ್ಯ ಒದಗಿಸುತ್ತೇವೆ ಅಂತಾ ತಹಶೀಲ್ದಾರ್ ಭರವಸೆ ನೀಡಿದ್ರಂತೆ.. ಆದ್ರೆ ಈವರೆಗೂ ವೃದ್ಧೆಗೆ ಮೂಲಭೂತ ಸೌಕರ್ಯವನ್ನು ಒದಗಿಸದ ಹಿನ್ನೆಲೆ ಇದನ್ನು ವಾಟ್ಸಾಪ್ ಮೂಲಕ ತಹಶೀಲ್ದಾರ್‌ಗೆ ವಿದ್ಯಾರ್ಥಿ ದೇವರಾಜ್ ಪ್ರಶ್ನೆ ಮಾಡಿದ್ದಾರೆ. ವಿದ್ಯಾರ್ಥಿ ಪ್ರಶ್ನೆ ಮಾಡಿದ್ದಕ್ಕೆ ಸಿಡಿಗೆದ್ದ ತಹಶೀಲ್ದಾರ್ ಪುರಂದರ ಅವರು ವಿದ್ಯಾರ್ಥಿ ದೇವರಾಜ್‌ಗೆ ವಾಟ್ಸಾಪ್ ಮೂಲಕ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿನ್ನ ವಿದ್ಯಾರ್ಥಿ ಜೀವನ ಹಾಳು ಮಾಡುತ್ತೇನೆ ಅಂತಾ ಬೆದರಿಕೆ ಹಾಕಿದ್ದಾರಂತೆ. ಅಲ್ದೇ ತಹಶೀಲ್ದಾರ್ ನಿನ್ನ ಮೇಲೆ ದೂರು ನೀಡಿದ್ದಾರೆ ಸ್ಟೇಷನ್‌ಗೆ ಬರುವಂತೆ ಪೊಲೀಸರಿಂದ ಕರೆ ಮಾಡಿಸಲಾಗಿದೆ ಎಂದು ತಹಶೀಲ್ದಾರ್ ಪುರಂದರ ಮೇಲೆ ವಿದ್ಯಾರ್ಥಿ ದೇವರಾಜ್ ಗಂಭೀರ ಆರೋಪ ಮಾಡ್ತಾ ಇದ್ದಾರೆ. ಅಲ್ದೇ ರಕ್ಷಣೆ ಕೋರಿ ವಿದ್ಯಾರ್ಥಿ ದೇವರಾಜ್ ಜಿಲ್ಲಾಧಿಕಾರಿ, ಮಾನವ ಹಕ್ಕು ಆಯೋಗ, ಕಾನೂನು ಸೇವಾ ಪ್ರಾಧಿಕಾರದ ಮೊರೆ ಹೋಗಿದ್ದಾರೆ.
ಇನ್ನು ಚಿಕ್ಕನಾಯಕನಹಳ್ಳಿಯ ತೀರ್ಥಪುರ ಗ್ರಾಮದ ವೃದ್ದೆ ದೊಡ್ಡಮ್ಮಗೆ ಸರ್ಕಾರದಿಂದ ಕನಿಷ್ಠ ಮೂಲಭೂತ ಸೌಕರ್ಯವನ್ನು ಸರ್ಕಾರ ನೀಡಿಲ್ಲ.. ಮನೆಯಲ್ಲಿ ವೃದ್ಧೆ, ಬುದ್ದಿಮಾಂದ್ಯ ಮಗಳು ಹಾಗೂ ಮೊಮ್ಮಗ ಇದ್ದು, ಮನೆಗೆ ಸರಿಯಾದ ಬಾಗಿಲು ಕೂಡ ಇಲ್ಲ.. ಕಿತ್ತು ತಿನ್ನುವ ಬಡತನ.. ಆಧಾರ್ ಕಾರ್ಡ್ ಆಗಲಿ, ರೇಷನ್ ಕಾರ್ಡ್ ಆಗಲಿ ಇಲ್ಲದೇ ಅಜ್ಜಿ ನಿತ್ಯ ಭಿಕ್ಷೆ ಬೇಡಿ ಜೀವನ ಸಾಗಿಸ್ತಾ ಇದ್ದಾಳೆ.. ಈ ವೃದ್ಧೆಯ ಕರುಣಾಜನಕ ಕಥೆ ಕೆಲ ಮಾಧ್ಯಮದಲ್ಲೂ ವರದಿಯಾಗಿತ್ತು.. ವರದಿ ಬೆನ್ನಲ್ಲೇ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಪುರಂದರ ಅವರು ವೃದ್ಧೆಗೆ ಮೂಲಭೂತ ಸೌಕರ್ಯವನ್ನು ಒದಗಿಸುವುದಾಗಿ ಭರವಸೆ ನೀಡಿದ್ರು. ಆದ್ರೆ ಭರವಸೆ ನೀಡಿ 7 ತಿಂಗಳೇ ಕಳೆದ್ರು ಇನ್ನು ಒಂದೇ ಒಂದು ಸವಲತ್ತುಗಳನ್ನು ಆ ವೃದ್ಧೆಗೆ ತಾಲೂಕು ಆಡಳಿತ ನೀಡಿರಲಿಲ್ಲ.. ಹೀಗಾಗಿ ವೃದ್ಧೆಯ ಪರಿಸ್ಥಿತಿಗೆ ಮರುಗಿದ ವಿದ್ಯಾರ್ಥಿ ದೇವರಾಜು ಖುದ್ದು ತಹಶೀಲ್ದಾರ್‌ಗೆ ವಾಟ್ಸಪ್ ಮೂಲಕ ಪ್ರಶ್ನಿಸಿದ್ದು ಈಗ ವಿದ್ಯಾರ್ಥಿ ಭವಿಷ್ಯಕ್ಕೆ ಕಂಟಕ ತಂದುಕೊಂಡಂತಾಗಿದೆ, ಜವಾಬ್ದಾರಿ ಸ್ಥಾನದಲ್ಲಿರೊ ಅಧಿಕಾರಿ ಸ್ಟೂಡೆಂಟ್ ಭವಿಷ್ಯಕ್ಕೆ ಮುಳುವುಗ್ತಾರೆ ಅಂದ್ರೆ ಏನು ಅರ್ಥ.. ಇವರನ್ನು ಸಾಮಾನ್ಯ ಪ್ರಜೆಗಳು ಪ್ರಶ್ನೆ ಮಾಡಬಾರದು ಅಂತಾನಾ..? ಅಥವಾ ಅಧಿಕಾರ ಇದೆ ಎಂದು ಸರ್ವಾಧಿಕಾರಿ ಆಗಿ ದಬ್ಬಾಳಿಕೆ ಮಾಡೋದಾ….?
ಅದೇನೆ ಆಗಲಿ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿರೋ ನಾವು ಪ್ರತಿಯೊಂದನ್ನು ಪ್ರಶ್ನಿಸುವ ಹಕ್ಕು ಇದೆ.. ಆದ್ರೆ ನೀಡಿದ ಭರವಸೆಯನ್ನು ಈಡೇರಿಸಲಿಲ್ಲ ಅನ್ನೋದನ್ನ ಪ್ರಶ್ನೆ ಮಾಡಿದ್ದ ಅನ್ನೋ ಒಂದೇ ಕಾರಣಕ್ಕೆ ವಿದ್ಯಾರ್ಥಿಗೆ ತಹಶೀಲ್ದಾರ್ ಬೆದರಿಕೆ ಹಾಕ್ತಾರೆ ಅಂದ್ರೆ, ನಮ್ಮ ಕಾನೂನು ವ್ಯವಸ್ಥೆ ಹೇಗಿದೆ… ಅಧಿಕಾರಿಗಳಿಗೆ ಲಂಗು ಲಾಗಾಮು ಹಾಕೋರೆ ಇಲ್ವಾಯ್ತಾ ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಸಚಿವರು, ಜಿಲ್ಲಾಧಿಕಾರಿ ವೃದ್ಧೆಗೆ ಕನಿಷ್ಠ ಮೂಲಭೂತ ಸೌಕರ್ಯವನ್ನು ಒದಗಿಸುವುದರ ಜೊತೆಗೆ ತಹಶೀಲ್ದಾರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.