ಮಧುಗಿರಿ : ದೇಗುಲ ಪ್ರವೇಶಿಸಿದ ದಲಿತ ಯುವಕನಿಗೆ ಸವರ್ಣೀಯರಿಂದ ಧಮ್ಕಿ

ಮಧುಗಿರಿ :

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳೇ ಕಳೆದುಹೋಗಿವೆ. ನಾವೆಲ್ಲಾ ಈಗ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಸಮಾನತೆಯ ಆಧಾರದಲ್ಲಿ ರಚಿಸಿದ ಸಂವಿಧಾನದ ಅಡಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಆದರೆ ನಮ್ಮಲ್ಲಿ ಈ ಅಸ್ಪೃಶ್ಯತೆ ಅನ್ನೋ ಪಿಡುಗು ಮಾತ್ರ ಇನ್ನೂ ದೂರವಾಗಿಲ್ಲ. ಕಲ್ಪತರು ನಾಡು ಅಂತಲೇ ಕರೆಸಿಕೊಳ್ಳುವ ತುಮಕೂರಿನಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದ್ದು, ದೇವಸ್ಥಾನಕ್ಕೆ ಪ್ರವೇಶಿಸಿದ ದಲಿತ ಯುವಕನಿಗೆ ಸವರ್ಣೀಯರು ಧಮ್ಕಿ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

ಗೃಹ ಸಚಿವರ ತವರು ಜಿಲ್ಲೆ ಜೊತೆಗೆ ಸಹಕಾರ ಸಚಿವರ ಸ್ವಕ್ಷೇತ್ರ ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಕವಣದಾಲ ಗ್ರಾಮದಲ್ಲಿ ಇಂಥದ್ದೊಂದು ಅಮಾನವೀಯ ಘಟನೆ ನಡೆದಿದೆ. ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಹೋದಾಗ ದಲಿತ ಯುವಕನಿಗೆ ಸವರ್ಣೀಯರು ದೇವಸ್ಥಾನಕ್ಕೆ ಪ್ರವೇಶವನ್ನು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ, ದೇವಸ್ಥಾನದ ಒಳಗೆ ಹೋಗಿದ್ದಕ್ಕೆ ಧಮ್ಕಿಯನ್ನು ಕೂಡ ಹಾಕಿದ್ದಾರೆ.

ಕವಣದಾಲ ಗ್ರಾಮದ ರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಅದೇ ಗ್ರಾಮದ ಮಾದಿಗ ಸಮುದಾಯಕ್ಕೆ ಸೇರಿರೋ ಸ್ವಾಮಿನಾಥ ಎಂಬ ಯುವಕ, ನಿನ್ನೆ 8 ಗಂಟೆಯ ಸುಮಾರಿಗೆ ಸ್ನಾನ ಮಾಡಿಕೊಂಡು ಹಣ್ಣು, ಕಾಯಿ ಹಿಡಿದು ಪೂಜೆ ಸಲ್ಲಿಸುವ ಸಲುವಾಗಿ ದೇವಸ್ಥಾನದ ಒಳಗೆ ಹೋಗಿದ್ದಾನೆ. ಆಗ ತಕ್ಷಣ ಆತನನ್ನು ಹೊರಕ್ಕೆ ಕಳುಹಿಸಿ ಅವಮಾನಿಸಿರುವ ಕೆಲವು ಸವರ್ಣೀಯರು, ದಲಿತರು ದೇವಸ್ಥಾನದ ಒಳಗಡೆ ಹೋಗಬಾರದು ಅಂತಾ ಧಮ್ಕಿ ಹಾಕಿದ್ದಾರೆ.

ಇನ್ನು ಇದಾಗ್ತಿದ್ದಂತೆ ಸವರ್ಣೀಯರು ಮತ್ತು ಕೆಲ ದಲಿತ ಯುವಕರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ. ಮೇಲ್ಜಾತಿಯವರು ಗುಂಪು ಗೂಡಿಕೊಂಡು ದಲಿತ ಯುವಕರ ಮೇಲೆ ಧಮ್ಕಿ ಹಾಕುವ ಪ್ರಯತ್ನ ಮಾಡಿದ್ದಾರೆ. ಮೊದಲಿನಿಂದಲೂ ದಲಿತರು ದೇವಸ್ಥಾನದ ಒಳಗೆ ಬರ್ತಿಲ್ಲ. ನೀವೂ ಬರಬಾರದು ಅಂತಾ ಸವರ್ಣೀಯರು ಆವಾಜ್‌ ಹಾಕಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿರುವ ಘಟನೆ ಸಂಬಂಧ ದಲಿತ ಯುವಕ ಸ್ವಾಮಿನಾಥ್‌ ಅಧಿಕಾರಿಗಳಿಗೆ ದೂರು ನೀಡಿದ್ದು, ತಕ್ಷಣವೇ ಬಡವನಹಳ್ಳಿ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇಂದು ಘಟನಾ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ ತಹಶೀಲ್ದಾರ್ ಭೇಟಿ ನೀಡುವ ಸಾಧ್ಯತೆಯಿದೆ.

Author:

...
Sushmitha N

Copy Editor

prajashakthi tv

share
No Reviews