ಮಧುಗಿರಿ :
ಅದು ಮೇ 10 ನೇ ತಾರೀಖು ಮಧುಗಿರಿ ತಾಲ್ಲೂಕಿನ ಕವಣದಾಲ ಗ್ರಾಮದಲ್ಲಿನ ರಾಮಾಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಬಂದಿದ್ದ ಪರಿಶಿಷ್ಟ ಜಾತಿಗೆ ಸೇರಿದ ಯುವಕನನ್ನ ದೇವಾಲಯದಿಂದ ಹೊರಗಡೆ ಕಳುಹಿಸಿದ್ರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮಹಿಳೆಯ ರು ಸೇರಿ 10 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದ್ರೆ ಘಟನೆ ನಡೆದು ನಾಲ್ಕು ದಿನವಾದರೂ ಇನ್ನು ಪೊಲೀಸರು ತಪ್ಪಿತಸ್ಥರನ್ನು ಬಂಧಿಸುವಲ್ಲಿ ಮೀನಾಮೇಶ ಎಣಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಹೌದು, ಯುವಕ ನೀಡಿದ ದೂರಿನ ಮೇರೆಗೆ ಕವಣದಾಲ ಗ್ರಾಮಸ್ಥರಾದ ಗಿರಿಯಣ್ಣ ಗೌಡ, ಅನಂತ, ಶಿವಾನಂದ, ಯೋಗೀಶ, ಶಿವಮ್ಮ, ನಿಂಗಮ್ಮ, ಮಂಜುನಾಥ, ಮಹಾಂತೇಶ, ವೀರೇಶ, ಯಶೋದಮ್ಮ ವಿರುದ್ಧ ಬಿಎನ್‌ಎಸ್ 191 (2) (ದೊಂಬಿ), 351 (ಬೆದರಿಕೆ), 351 (2) (ಶಾಂತಿ ಭಂಗ, ಉದ್ದೇಶ ಪೂರ್ವಕವಾಗಿ ಅವಮಾನ) ಸೇರಿ ವಿವಿಧ ಕಲಂ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆದ್ರೆ ಪೋಲಿಸರು ಮಾತ್ರ ತಪ್ಪಿತಸ್ಥರನ್ನು ಬಂಧಿಸುವಲ್ಲಿ ಯಾಕೋ ಮೀನಾಮೇಶ ಎಣಿಸುತ್ತಿದ್ದಾರೆ.
ಇನ್ನು 'ನೀನು ದೇವಸ್ಥಾನದ ಒಳಗಡೆ ಇದ್ದರೆ ಮೈಲಿಗೆಯಾಗುತ್ತದೆ, ಹೊರಗಡೆ ಹೋಗು. ಇಲ್ಲದಿದ್ದರೆ ನಿನ್ನ ಕೊಲೆ ಮಾಡುತ್ತೇವೆ. ನಿನ್ನ ಮುಗಿಸಿ ಬಿಡುತ್ತೇವೆ''ನಿನ್ನ ಜಾತಿಯವರು ಎಂದೂ ದೇಗುಲದ ಒಳಗೆ ಬಂದಿಲ್ಲ. ನೀನೊಬ್ಬನೇ ಬಂದಿರುವುದು' ಎಂದು ಬೆದರಿ ಹಾಕಿದ್ದರು ಎಂದು ಯುವಕ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಯುವಕ ಮೇ 10ರಂದು ಸಂಜೆ ಪೂಜೆ ಮಾಡಿಸಲು ದೇವಸ್ಥಾನಕ್ಕೆ ಹೋಗಿದ್ದ. ಈ ವೇಳೆ ಸ್ಥಳದಲ್ಲಿದ್ದ ಒಕ್ಕಲಿಗ ಸಮುದಾಯದವರು ಯುವಕ ನನ್ನು ಹೊರಗಡೆ ಕಳುಹಿಸಿದ್ದರು. ಇದೇ ವಿಚಾರವಾಗಿ ದೇಗುಲದ ಮುಂಭಾಗದಲ್ಲಿ ಮಾತಿನ ಚಕಮಕಿ ನಡೆದಿತ್ತು. ಈ ಗಲಾಟೆ ಕುರಿತು ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿತ್ತು. ಮೇ 11ರಂದು ಪೊಲೀಸರು, ಅಧಿಕಾರಿಗಳು, ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ನಡೆಸಿದ್ದರು. ಮುಂದಿನ ದಿನಗಳಲ್ಲಿ ದೇವಾಲಯಕ್ಕೆ ಹೋಗಲು ಯಾರಿಗೂ ನಿರ್ಬಂಧ ವಿಧಿಸದಂತೆ ಸೂಚಿಸಿದ್ದರು.
ಆದರೆ ಘಟನೆ ನಡೆದು 4 ದಿನ ಕಳೆದರೂ ಬಡವನಹಳ್ಳಿ ಪಿಎಸ್‌ಐ ಕಾಂತರೆಡ್ಡಿ ಆರೋಪಿಗಳನ್ನು ಇದುವರೆಗೂ ಬಂಧಿಸಿಲ್ಲ. ಆರೋಪಿಗಳ ಬಂಧನಕ್ಕೆ ಪೊಲೀಸ್ ಇಲಾಖೆ ಮೀನಾಮೇಷ ಮಾಡುತಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಗ್ರಾಸವಾಗಿದ್ದು. ದಲಿತ ಪರ ಸಂಘನೆಗಳ ಆಕ್ರೋಶಕ್ಕೆ ಕಾರಣವಾಗಿದೆ.