ಶಿರಾ:
ಭೂಕಳ್ಳರು ಲೇಔಟ್ ನಿರ್ಮಾಣಕ್ಕಾಗಿ ಪುರಾತನವಾದ ಸಮಾಧಿಗಳನ್ನು ಜೆಸಿಬಿ ಮೂಲಕ ಏಕಾಏಕಿ ಧ್ವಂಸ ಮಾಡಿದ್ದು, ಸ್ಥಳೀಯರನ್ನು ಕೆರಳಿಸುವಂತೆ ಮಾಡಿತ್ತು. ಶಿರಾ ನಗರದ ಬೂದಿಣ್ಣೆಯಲ್ಲಿದ್ದ ಪುರಾತನವಾದ ಸ್ಮಶಾನದ ಜಾಗವನ್ನು ಲೇಔಟ್ ಮಾಲೀಕ ಜಗದೀಶ್ ಎಂಬಾತ ನಕಲಿ ದಾಖಲೆ ಸೃಷ್ಟಿಸಿ ಸ್ಮಶಾನದಲ್ಲಿದ್ದ ಸಮಾಧಿಗಳನ್ನು ಜೆಸಿಬಿ ಮೂಲಕ ಕೆಡವಲು ಮುಂದಾಗಿದ್ದು ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿ ಆಕ್ರೋಶ ಹೊರಹಾಕಿದ್ರು, ಇನ್ನು ಪುರಾತನ ಸ್ಮಶಾನವನ್ನು ಕೆಡವಲು ಮುಂದಾಗಿದ್ದಕ್ಕೆ ಹಿಂದೂ ಜಾಗರಣ ವೇದಿಕೆ ಕಿಡಿಕಾರುತ್ತಿದ್ದು, ತಹಶೀಲ್ದಾರ್‌ಗೆ ದೂರು ನೀಡಿದ್ದಾರೆ.
ಲೇಔಟ್ ಮಾಲೀಕ ಜಗದೀಶ್‌ನಿಂದ ಸ್ಮಶಾನ ಕಬಳಿಕೆ ಆರೋಪ ಕೇಳಿ ಬರ್ತಿದ್ದಂತೆ ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ್ಯ ಸಂಚಾಲಕ ಮಂಜುನಾಥ್ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ, ಸ್ಥಳೀಯರಿಂದ ಮಾಹಿತಿಯನ್ನ ಪಡೆದುಕೊಂಡ್ರು. ಬಳಿಕ ಶಿರಾ ತಹಶೀಲ್ದಾರ್ ಸಚ್ಚಿದಾನಂದ ಕೂಚನೂರುರನ್ನು ಭೇಟಿ ಮಾಡಿ ಸಮಾಧಿ ತೆರವು ಮಾಡುವುದರ ಬಗ್ಗೆ ದೂರು ನೀಡಿದ್ರು. ಬೇರೆಯವರ ಹೆಸರಿಗೆ ಸ್ಮಶಾನದ ಜಾಗ ಖಾತೆಯಾಗಿದ್ದು, ದಾಖಲೆ ಇಲ್ಲದೇ ಬೇರೆಯವರ ಹೆಸರಿಗೆ ಹೇಗೆ ಖಾತೆ ಮಾಡಿದ್ರು. ಗ್ರಾಮ ಲೆಕ್ಕಾಧಿಕಾರಿ, ಆರ್ ಐ ಏನ್ಮಾಡುತ್ತಿದ್ದಾರೆ, ಖಾತೆ ಮಾಡುವಾಗ ಅವರಿಗೆ ಸಮಾಧಿ ಬಗ್ಗೆ ಮಾಹಿತಿ ಇರಲಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ಈ ವೇಳೆ ತಹಶೀಲ್ದಾರ್ ಹಾಗೂ ಹಿಂದೂ ಜಾಗರಣ ವೇದಿಕೆ ನಡುವೆ ಕೆಲ ಕಾಲ ವಾಗ್ವಾದ ಏರ್ಪಟ್ಟಿದ್ದು, ಕೆಲ ಕಾಲ ಗೊಂದಲದ ವಾತಾವರಣ ಉಂಟಾಗಿತ್ತು. ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಖಾತೆಯನ್ನು ರದ್ದು ಮಾಡಿ, ಸದರಿ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ್ಯ ಸಂಚಾಲಕ ಮಂಜುನಾಥ್ ಆಗ್ರಹಿಸಿದರು.