ಬಾಗಲಕೋಟೆ : “ನಾನು ಸಿದ್ದರಾಮಯ್ಯ ಒಂದೇ ತಂಡದಲ್ಲಿದ್ದವರು, ಆದ್ರೆ ಈಗ ಸಿದ್ದರಾಮಯ್ಯ ಅವರು ಏನು ಮಾತನಾಡುತ್ತಿದ್ದಾರೆ ಎಂಬುದು ಅವರಿಗೆ ಅರಿವಿಲ್ಲ, ಅವರಿಗೆ ಈಗ ಮರೆವು ಜಾಸ್ತಿ ಆಗಿದೆ,” ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಟೀಕಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸೋಮಣ್ಣ, "ನಾನು ಸಿದ್ದರಾಮಯ್ಯನವರನ್ನು ಹತ್ತಿರದಿಂದ ನೋಡಿದ್ದೇನೆ. ಅಂದಿನ ಸಿದ್ದರಾಮಯ್ಯ ಬೇರೆ, ಇಂದಿನ ಸಿದ್ದರಾಮಯ್ಯ ಬೇರೆ. ಅವರ ಮಾತುಗಳಲ್ಲಿ ಗಂಭೀರತೆ ಕಾಣುತ್ತಿಲ್ಲ. ಯಾರನ್ನೋ ತೃಪ್ತಿ ಪಡಿಸಲು ಏನೇನೋ ಹೇಳುತ್ತಾ ಇರುತ್ತಾರೆ," ಎಂದು ಕಟುವಾಗಿ ಪ್ರತಿಕ್ರಿಯಿಸಿದರು.
ತಾವು ಸಿದ್ದರಾಮಯ್ಯನವರೊಂದಿಗೆ ಒಂದೇ ತಂಡದಲ್ಲಿ ಕೆಲಸ ಮಾಡಿದ್ದ ವಿಚಾರವನ್ನು ನೆನಪಿಸಿದ ಅವರು, “ಇಂದಿನ ಅವರ ನಡೆಗಳು ಮತ್ತು ಭಾಷಣಗಳು ಅರ್ಥವಿಲ್ಲದ ರೀತಿಯಲ್ಲಿ ಹೋಗುತ್ತಿವೆ” ಎಂದರು. ಸೋಮಣ್ಣ ತಮ್ಮ ಭಾಷಣದಲ್ಲಿ, "ನಾವೆಲ್ಲಾ ಭಾರತ ಮಣ್ಣಿನ ಮಕ್ಕಳು. ಭಾರತಕ್ಕೆ ಸಣ್ಣ ಅಪಚಾರ ಮಾಡಿದರೂ ಭಾರತಾಂಬೆ ಸುಮ್ಮನೆ ಕೂತಿರೋದಿಲ್ಲ," ಎಂದು ಗಂಭೀರ ಎಚ್ಚರಿಕೆ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ಆಪರೇಶನ್ ಸಿಂಧೂರ’ ತೀರ್ಮಾನವನ್ನು ಉಲ್ಲೇಖಿಸಿ, “ಈ ತೀರ್ಮಾನಕ್ಕೆ ನಾವು ತಲೆ ಬಾಗಬೇಕು. ಮೋದಿ ತೆಗೆದುಕೊಂಡ ನಿರ್ಧಾರಗಳಿಗೆ ಅಪಪ್ರಚಾರ ಮಾಡುವುದು ತಪ್ಪು. ಹಾಗೆ ಮುಂದುವರೆದರೆ, ಮುಂದೆ ಯಾರೂ ನಿಮ್ಮನ್ನೇ ಪರಿಗಣಿಸುವವರಿಲ್ಲ. ನಿಮಗೆ ಮಾರುಕಟ್ಟೆ ಉಳಿಯದು,” ಎಂದು ತೀವ್ರ ಟೀಕಿಸಿದ್ದಾರೆ.