Kerala ದಲ್ಲಿ ಭಾರೀ ಮಳೆ, ಭೂಕುಸಿತ – ಪ್ರವಾಹಕ್ಕೆ ಮೂವರ ಸಾವು: ಇಡುಕ್ಕಿ ಸೇರಿ ಹಲವು ಜಿಲ್ಲೆಗಳಲ್ಲಿ ಅವಾಂತರ

ಕೇರಳದಲ್ಲಿ (Kerala) ಭಾರಿ ಮಳೆಯ ಅಬ್ಬರ ಮುಂದುವರಿದಿದ್ದು, ಪ್ರವಾಹ ಮತ್ತು ಭೂಕುಸಿತದಿಂದ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಸಂಭವಿಸಿದ ಪ್ರತ್ಯೇಕ ಭೂಕುಸಿತಗಳಲ್ಲಿ ಮೂವರು ಸಾವನ್ನಪ್ಪಿದ್ದು, ಹಲವೆಡೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಪರಿಸ್ಥಿತಿಯ ತೀವ್ರತೆಯನ್ನು ಗಮನಿಸಿ ಭಾರತೀಯ ಹವಾಮಾನ ಇಲಾಖೆ (IMD) ರಾಜ್ಯದ ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.
ಇಡುಕ್ಕಿಯಲ್ಲಿ ಭೂಕುಸಿತಕ್ಕೆ ಮಹಿಳೆ ಬಲಿ
ಇಡುಕ್ಕಿ ಜಿಲ್ಲೆಯ ಕೂಡಯತ್ತೂರು ಸಮೀಪದ ಆದೂರ್ಮಲ ಪ್ರದೇಶದಲ್ಲಿ ಇಂದು ಮುಂಜಾನೆ ಸಂಭವಿಸಿದ ಭೂಕುಸಿತದಲ್ಲಿ ಸುಮತಿ ಎಂಬುವವರು ಮೃತಪಟ್ಟಿದ್ದಾರೆ. ಭೂಕುಸಿತದ ಅವಶೇಷಗಳು ಮನೆಯ ಮೇಲೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಸ್ಥಳೀಯರು ಸುಮತಿ ಅವರ ಪತಿ ಮತ್ತು ಪುತ್ರನನ್ನು ರಕ್ಷಿಸಿದ್ದು, ಗಾಯಗೊಂಡ ಇಬ್ಬರನ್ನೂ ತೊಡುಪುಳದ ಆಸ್ಪತ್ರೆಗೆ ದಾಖಲಿಸಲಾಗಿದೆ. ಎನ್ಡಿಆರ್ಎಫ್, ಅಗ್ನಿಶಾಮಕ ದಳ, ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಸುಮತಿ ಅವರ ಮೃತದೇಹವನ್ನು ಪತ್ತೆಹಚ್ಚಲಾಗಿದೆ. ಭೂಕುಸಿತದಿಂದ ಕುಟುಂಬದ ಮನೆ ಸಂಪೂರ್ಣ ಹಾನಿಗೊಳಗಾಗಿದೆ.

ಕೊಟ್ಟಾಯಂನಲ್ಲಿ ಮತ್ತೊಂದು ದುರಂತ
ಇನ್ನು ಕೊಟ್ಟಾಯಂ ಜಿಲ್ಲೆಯ ಪೂಂಜಾರ್ನ ಪಯ್ಯನಿತೊಟ್ಟಂನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಜೋಹ್ನಿ ಅವರ ಪುತ್ರ ಜೋಸೆಫ್ ಸಾವನ್ನಪ್ಪಿದ್ದಾರೆ.
ಅವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಗಾಯಗಳ ತೀವ್ರತೆಯಿಂದ ಮೃತಪಟ್ಟಿದ್ದಾರೆ. ಜೋಸೆಫ್ ಅವರ ತಾಯಿ ಭೂಕುಸಿತದ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಸಿಬ್ಬಂದಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಇದನ್ನು ಓದಿ : ಕೇರಳದ ಕೊಟ್ಟಿಯೂರು ದೇಗುಲದಲ್ಲಿ ಕನ್ನಡಿಗರ ಮೇಲೆ ದರ್ಪ..!
ವಾಗಮನ್ನಲ್ಲಿ ಮತ್ತೊಬ್ಬರ ಸಾವು
ಇಡುಕ್ಕಿ ಜಿಲ್ಲೆಯ ವಾಗಮನ್ ಪ್ರದೇಶದಲ್ಲೂ ಭೂಕುಸಿತ ಸಂಭವಿಸಿದ್ದು, ವೈಕಂ ಮೂಲದ ಪ್ರಭಾಕರನ್ ನಾಯರ್ ಮೃತಪಟ್ಟಿದ್ದಾರೆ.
ಸಂಬಂಧಿಕರ ಮನೆಯಲ್ಲಿ ಮಲಗಿದ್ದ ವೇಳೆ ಭೂಕುಸಿತ ಸಂಭವಿಸಿದ್ದು, ಹಲವು ಗಂಟೆಗಳ ಶೋಧ ಕಾರ್ಯಾಚರಣೆಯ ಬಳಿಕ ಅವರ ಮೃತದೇಹ ಪತ್ತೆಯಾಗಿದೆ.

ಪ್ರವಾಹ ಮತ್ತು ಭೂಕುಸಿತದಿಂದ ಸಂಚಾರ ಅಸ್ತವ್ಯಸ್ತ
ಭಾರಿ ಮಳೆಯಿಂದ ಇಡುಕ್ಕಿಯ ಹಲವು ಭಾಗಗಳಲ್ಲಿ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
- ಉಪ್ಪುತಾರದಲ್ಲಿ ನಿಲ್ಲಿಸಿದ್ದ ಪೊಲೀಸ್ ಜೀಪ್ ಭೂಕುಸಿತಕ್ಕೆ ಸಿಲುಕಿ ಹಾನಿಗೊಳಗಾಗಿದೆ.
- ಪುಲ್ಲಕಯಾರ್ ನದಿ ಉಕ್ಕಿ ಹರಿದ ಪರಿಣಾಮ ಕೊಕ್ಕಯಾರ್ನ ತಗ್ಗು ಸೇತುವೆ ಮುಳುಗಿದೆ.
- ಸುಮಾರು ಆರು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
- ಕಟ್ಟಪ್ಪನ–ವಳವಾಡ ರಸ್ತೆ ಭೂಕುಸಿತದಿಂದ ಬಂದ್ ಆಗಿದೆ.
- ವಂಡಿಪೆರಿಯಾರ್ನ ಚೊಟ್ಟೂಪಾರ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿ-183ರ ಕೆಲ ಭಾಗಗಳು ಜಲಾವೃತಗೊಂಡಿವೆ.
- ನೆಲ್ಲಿಮಲ ಪ್ರದೇಶದಲ್ಲೂ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ.
ಕೊಟ್ಟಾಯಂ, ಪತ್ತನಂತಿಟ್ಟದಲ್ಲೂ ಪ್ರವಾಹ
ಕೊಟ್ಟಾಯಂ ಜಿಲ್ಲೆಯ ಎರಟ್ಟೂಪೆಟ್ಟ, ಕಂಜಿರಪ್ಪಳ್ಳಿ ಹಾಗೂ ಕೂಟ್ಟಿಕ್ಕಲ್ ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಎರಟ್ಟೂಪೆಟ್ಟ ಪಟ್ಟಣದಲ್ಲಿ ನೀರಿನ ಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಇನ್ನು ಹಲವು ಮನೆಗಳಿಗೆ ನೀರು ನುಗ್ಗಿದ್ದು, ರಕ್ಷಣಾ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಮೇಲಂತಸ್ತಿನಲ್ಲಿ ಸಿಲುಕಿದ್ದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.
ಕೂಟ್ಟಿಕ್ಕಲ್ ಮತ್ತು ಮುಂಡಕ್ಕಯಂನಲ್ಲಿ ಮಣಿಮಲ ಹಾಗೂ ಪುಲ್ಲಕಯಾರ್ ನದಿಗಳು ಉಕ್ಕಿ ಹರಿದ ಪರಿಣಾಮ ತಗ್ಗು ಸೇತುವೆಗಳು ಮುಳುಗಿವೆ. ಪತ್ತನಂತಿಟ್ಟ ಜಿಲ್ಲೆಯ ರನ್ನಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರವಾಹದ ಆತಂಕ ಎದುರಾಗಿದ್ದು, ಪಂಪಾ ನದಿಯ ನೀರಿನ ಮಟ್ಟವೂ ಏರಿಕೆಯಾಗಿದೆ. ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿದ್ದು, ರಕ್ಷಣಾ ಕಾರ್ಯಾಚರಣೆಗೆ ದೋಣಿಗಳನ್ನು ನಿಯೋಜಿಸಿ ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ.
ಇದರ ಜೊತೆಗೆ ಕೊಲ್ಲಂ, ಕೋಝಿಕ್ಕೋಡ್, ಮಲಪ್ಪುರಂ ಹಾಗೂ ಪಾಲಕ್ಕಾಡ್ ಜಿಲ್ಲೆಗಳ ಕೆಲವು ಭಾಗಗಳಲ್ಲೂ ಪ್ರವಾಹ ಮತ್ತು ಸಣ್ಣ ಪ್ರಮಾಣದ ಭೂಕುಸಿತಗಳು ವರದಿಯಾಗಿವೆ.

Kerala ದ ಹಲವು ಜಿಲ್ಲೆಗಳಿಗೆ ಎಚ್ಚರಿಕೆ
ಭಾರಿ ಮಳೆಯ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಕೇರಳದ ಹಲವು ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದೆ.
ಪತ್ತನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಮಲಪ್ಪುರಂ, ಕೋಝಿಕ್ಕೋಡ್, ವಯನಾಡು, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಎರ್ನಾಕುಳಂ, ತ್ರಿಶೂರ್ ಹಾಗೂ ಪಾಲಕ್ಕಾಡ್ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
ಇದನ್ನು ನೋಡಿ : ಸದ್ಯ ತಮಿಳುನಾಡಿನ ಸಿಎಂ ವಿಜಯ್ ಬರೋದು ಬೇಡ ಎಂದಿದ್ದು ಯಾಕೆ ಡಿಕೆಶಿ ?




