Rain Alert : ಕರ್ನಾಟಕದಾದ್ಯಂತ ಭಾರೀ ಮಳೆ: ಯೆಲ್ಲೋ, ಆರೇಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ.

Rain Alert : ದೇಶಾದ್ಯಂತ ಕುತೂಹಲ ಮೂಡಿಸಿದ್ದ ನೈಋತ್ಯ ಮುಂಗಾರು ಕೇರಳ ಕರಾವಳಿಯನ್ನು ಪ್ರವೇಶಿಸಿರುವ ಬೆನ್ನಲ್ಲೇ ಕರ್ನಾಟಕದಲ್ಲೂ ಮಳೆ ಚಟುವಟಿಕೆಗಳು ಚುರುಕುಗೊಳ್ಳಲಿವೆ. ರಾಜ್ಯದ ವಿವಿಧ ಭಾಗಗಳಲ್ಲಿ ಜೂನ್ 4ರಿಂದ ಜೂನ್ 9ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ ಸಾಧ್ಯತೆ
ಕರಾವಳಿ ಭಾಗದಲ್ಲಿ ಜೂನ್ 4ರಿಂದ ಸಾಧಾರಣ ಮಳೆ ಆರಂಭವಾಗಲಿದ್ದು, ಜೂನ್ 6ರಿಂದ 9ರವರೆಗೆ ಮಳೆಯ ತೀವ್ರತೆ ಹೆಚ್ಚಾಗುವ ನಿರೀಕ್ಷೆಯಿದೆ. ಕರಾವಳಿಯ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.
ಮತ್ತೊಂದೆಡೆ, ಮಲೆನಾಡು ಭಾಗದಲ್ಲೂ ಜೂನ್ 7ರಿಂದ 9ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು, ಕೆಲವೆಡೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ಒಳನಾಡು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆ
ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಕೆಲ ದಿನಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ವಿಶೇಷವಾಗಿ ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಗಂಟೆಗೆ 40ರಿಂದ 60 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇದ್ದು, ಗುಡುಗು ಮತ್ತು ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇದನ್ನು ಓದಿ : ಕರ್ನಾಟಕದಲ್ಲಿ ಮುಂದಿನ 9 ದಿನ ಭಾರೀ ಮಳೆ..!!
ತಾಪಮಾನದಲ್ಲಿ ಇಳಿಕೆ
ಮಳೆಯ ಪ್ರಭಾವದಿಂದ ರಾಜ್ಯದ ಹಲವು ಭಾಗಗಳಲ್ಲಿ ತಾಪಮಾನ ಇಳಿಕೆಯಾಗಲಿದೆ. ಮುಂದಿನ ದಿನಗಳಲ್ಲಿ ಗರಿಷ್ಠ ತಾಪಮಾನ 28 ರಿಂದ 31 ಡಿಗ್ರಿ ಸೆಲ್ಸಿಯಸ್ ನಡುವೆಯೂ, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿಯೂ ದಾಖಲಾಗುವ ಸಾಧ್ಯತೆ ಇದೆ.
ಕಳೆದ ಕೆಲವು ವಾರಗಳಿಂದ ಕಾಡುತ್ತಿದ್ದ ಬಿಸಿಲಿನ ತಾಪಕ್ಕೆ ಮುಂಗಾರು ಮಳೆ ತಾತ್ಕಾಲಿಕ ಪರಿಹಾರ ನೀಡುವ ನಿರೀಕ್ಷೆಯಿದೆ.

ಸಾರ್ವಜನಿಕರಿಗೆ ಮುನ್ನೆಚ್ಚರಿಕೆ
ಮುಂಗಾರು ಮಳೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ನಿವಾಸಿಗಳು, ರೈತರು ಹಾಗೂ ಸಾರ್ವಜನಿಕರು ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಗಳನ್ನು ಗಮನಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಭಾರೀ ಮಳೆ ವೇಳೆ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಲು ಸಲಹೆ ನೀಡಲಾಗಿದೆ.
ಇದನ್ನು ನೋಡಿ : ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ಬೆಂಗಳೂರು ನಗರಾಭಿವೃದ್ದಿ ಖಾತೆ ನೀಡದ್ದಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ





