ಅತ್ಯಂತ ಪ್ರಭಾವಶಾಲಿ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯ (ED) ವನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ದೇಶದಲ್ಲಿ ಹೆಚ್ಚುತ್ತಿರುವ ಹಣ ವರ್ಗಾವಣೆ ಹಾಗೂ ಆರ್ಥಿಕ ಅಪರಾಧ ಪ್ರಕರಣಗಳನ್ನು ತ್ವರಿತವಾಗಿ ತನಿಖೆ ನಡೆಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯವನ್ನು ಮತ್ತಷ್ಟು ಬಲಪಡಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ED ಇಲಾಖೆಯಲ್ಲಿ ವಿವಿಧ ಹುದ್ದೆಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲು ಹಣಕಾಸು ಸಚಿವಾಲಯದ ಕಂದಾಯ ಇಲಾಖೆ ಅಧಿಕೃತ ಅನುಮೋದನೆ ನೀಡಿದೆ.
ತನಿಖಾ ವಿಭಾಗದಲ್ಲಿ ಭಾರೀ ಪ್ರಮಾಣದ ಹುದ್ದೆಗಳ ಹೆಚ್ಚಳ
ಸರ್ಕಾರದ ಆದೇಶದ ಪ್ರಕಾರ, ಇಡಿಯ ತನಿಖಾ ವಿಭಾಗದಲ್ಲಿ ದೊಡ್ಡ ಮಟ್ಟದ ಹುದ್ದೆಗಳ ಏರಿಕೆ ಮಾಡಲಾಗಿದೆ. ಹೆಚ್ಚುವರಿ ನಿರ್ದೇಶಕರ ಹುದ್ದೆಗಳು 10ರಿಂದ 24ಕ್ಕೆ ಏರಿಕೆಯಾಗಿದ್ದು, ಜಂಟಿ ನಿರ್ದೇಶಕರ ಹುದ್ದೆಗಳು 28ರಿಂದ 49ಕ್ಕೆ ಹೆಚ್ಚಿಸಲಾಗಿದೆ.
ಇದೇ ವೇಳೆ ಉಪ ನಿರ್ದೇಶಕರ ಹುದ್ದೆಗಳು 148ರಿಂದ 267ಕ್ಕೆ ಮತ್ತು ಸಹಾಯಕ ನಿರ್ದೇಶಕರ ಹುದ್ದೆಗಳು 255ರಿಂದ 531ಕ್ಕೆ ಹೆಚ್ಚಳಗೊಂಡಿವೆ.
ತನಿಖೆಯ ತಳಮಟ್ಟದ ಪ್ರಮುಖ ಹುದ್ದೆಗಳಾದ ಜಾರಿ ಅಧಿಕಾರಿ ಹುದ್ದೆಗಳು 355ರಿಂದ 606ಕ್ಕೆ ಹಾಗೂ ಸಹಾಯಕ ಜಾರಿ ಅಧಿಕಾರಿ (AEO) ಹುದ್ದೆಗಳು 425ರಿಂದ 803ಕ್ಕೆ ಏರಿಕೆಗೊಂಡಿವೆ.

ಕಾನೂನು ಮತ್ತು ಭದ್ರತಾ ವಿಭಾಗಕ್ಕೂ ಬಲ
ತನಿಖೆ ಮಾತ್ರವಲ್ಲದೆ, ಪ್ರಕರಣಗಳ ಕಾನೂನು ಪ್ರಕ್ರಿಯೆ ವೇಗಗೊಳಿಸಲು ಕಾನೂನು ವಿಭಾಗ, ತೀರ್ಪು ವಿಭಾಗ ಮತ್ತು ವ್ಯವಸ್ಥೆಗಳ ಇಲಾಖೆಯಲ್ಲೂ ಹೊಸ ಹುದ್ದೆಗಳನ್ನು ಸೃಷ್ಟಿಸಲಾಗಿದೆ.
ಭದ್ರತಾ ವಿಭಾಗದ ಹಿರಿಯ ಕಾನ್ಸ್ಟೆಬಲ್ ಹುದ್ದೆಗಳ ಸಂಖ್ಯೆಯನ್ನೂ 209ರಿಂದ 273ಕ್ಕೆ ಹೆಚ್ಚಿಸಲಾಗಿದೆ.
EDಯ ಪ್ರಮುಖ ಜವಾಬ್ದಾರಿಗಳು
ಕೇಂದ್ರ ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಜಾರಿ ನಿರ್ದೇಶನಾಲಯವು ದೇಶದ ಪ್ರಮುಖ ತನಿಖಾ ಸಂಸ್ಥೆಯಾಗಿದ್ದು, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ತನಿಖೆ ನಡೆಸುವುದು ಇದರ ಮುಖ್ಯ ಜವಾಬ್ದಾರಿ.
ಇದರ ಜೊತೆಗೆ ವಿದೇಶಿ ವಿನಿಮಯ ನಿಯಮ ಉಲ್ಲಂಘನೆ (FEMA), ಆರ್ಥಿಕ ವಂಚನೆ ಮತ್ತು ರಾಷ್ಟ್ರದ ಆರ್ಥಿಕತೆಗೆ ಧಕ್ಕೆ ತರುವ ಅಪರಾಧಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದು ಇಡಿಯ ಪ್ರಮುಖ ಕಾರ್ಯವಾಗಿದೆ.
ಇದನ್ನು ಓದಿ : ರೈಲ್ವೆ ಇಲಾಖೆಯಲ್ಲಿ ಬೃಹತ್ ಉದ್ಯೋಗಾವಕಾಶ!

ಯುವಕರ ಗಮನ ಸೆಳೆಯುತ್ತಿರುವ AEO ಹುದ್ದೆ
ಇಡಿಯಲ್ಲಿನ ಸಹಾಯಕ ಜಾರಿ ಅಧಿಕಾರಿ (AEO) ಹುದ್ದೆ ಯುವಕರಲ್ಲಿ ಅತ್ಯಂತ ಜನಪ್ರಿಯವಾಗಿದೆ. ಈ ಹುದ್ದೆಗಳ ನೇಮಕಾತಿಯನ್ನು Staff Selection Commission ನಡೆಸುವ SSC CGL ಪರೀಕ್ಷೆಯ ಮೂಲಕ ಮಾಡಲಾಗುತ್ತದೆ.
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು.
ವಯೋಮಿತಿ 18ರಿಂದ 30 ವರ್ಷಗಳಾಗಿದ್ದು, ಮೀಸಲಾತಿ ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ಸಡಿಲಿಕೆ ಇರುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ Tier-1, Tier-2 ಪರೀಕ್ಷೆಗಳು ಹಾಗೂ ದಾಖಲೆ ಪರಿಶೀಲನೆ ನಡೆಯುತ್ತದೆ.
ಹಿರಿಯ ಹುದ್ದೆಗಳಿಗೆ IAS, IPS ಅಧಿಕಾರಿಗಳ ನಿಯೋಜನೆ
ದೇಶದ ಪ್ರತಿಷ್ಠಿತ ನಾಗರಿಕ ಸೇವೆಗಳಾದ IAS, IPS ಮತ್ತು IRS ಅಧಿಕಾರಿಗಳನ್ನು ಇತರ ಕೇಂದ್ರ ಇಲಾಖೆಗಳಿಂದ ಇಡಿಗೆ ನಿಯೋಜನೆ (ಡೆಪ್ಯುಟೇಶನ್) ಮೇರೆಗೆ ಕಳುಹಿಸಲಾಗುತ್ತದೆ.
ಇಂತಹ ಅಧಿಕಾರಿಗಳನ್ನು ಸಾಮಾನ್ಯವಾಗಿ ಇಡಿಯ ಸಹಾಯಕ ನಿರ್ದೇಶಕರು, ಉಪ ನಿರ್ದೇಶಕರು ಮತ್ತು ಜಂಟಿ ನಿರ್ದೇಶಕರಂತಹ ಪ್ರಮುಖ ಜವಾಬ್ದಾರಿಯುತ ಹುದ್ದೆಗಳಿಗೆ ನೇಮಕ ಮಾಡಿ ತನಿಖೆಯ ಉಸ್ತುವಾರಿಯನ್ನು ವಹಿಸಲಾಗುತ್ತದೆ.

ಇದನ್ನು ನೋಡಿ : ಭೂ ಮಾಪಕರ ಮುಷ್ಕರಕ್ಕೆ ಆಕ್ರೋಶ – ಸರ್ಕಾರದ ವಿರುದ್ಧ ಭುಗಿಲೆದ್ದ ರೈತರು!




