Delhi ಯ ಕರ್ತವ್ಯ ಪಥದಲ್ಲಿ 77ನೇ ಗಣರಾಜ್ಯೋತ್ಸವ ಅದ್ದೂರಿಯಾಗಿ ಆಚರಣೆ.

Delhi : ಇಂದು ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಂಭ್ರಮ ಅದ್ದೂರಿಯಾಗಿ ಆಚರಿಸಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯ ಪಥದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮವು ಸ್ತಬ್ಧ ಚಿತ್ರಗಳ ವೈಭವ, ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ಶಿಸ್ತಿನ ಪರೇಡ್ ಮೂಲಕ ಗಮನ ಸೆಳೆದಿದೆ.

ರಾಷ್ಟ್ರಪತಿ ಧ್ವಜಾರೋಹಣ, ಪ್ರಧಾನಿ ಮೋದಿ ಭಾಗವಹಿಕೆ
ಗಣರಾಜ್ಯೋತ್ಸವದ ಪ್ರಮುಖ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಇದರ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಜೊತೆಗೂಡಿ ಯುದ್ಧ ಸ್ಮಾರಕದಲ್ಲಿ ಪುಷ್ಪಗುಚ್ಛ ಅರ್ಪಿಸಿದರು. ನಂತರ ರಾಷ್ಟ್ರಧ್ವಜ ಹಾರಿಸಿ ಗೌರವ ಸಲ್ಲಿಸಲಾಯಿತು.

ವಂದೇ ಮಾತರಂ 150 ವರ್ಷ, ಆಪರೇಷನ್ ಸಿಂಧೂರ ಥೀಮ್
ಈ ವರ್ಷದ ಗಣರಾಜ್ಯೋತ್ಸವವು ವಿಶೇಷ ಅರ್ಥ ಹೊಂದಿತ್ತು. ‘ವಂದೇ ಮಾತರಂ’ ಗೀತೆಗೆ 150 ವರ್ಷ ಪೂರ್ಣಗೊಂಡ ಹಿನ್ನೆಲೆ. ಆಪರೇಷನ್ ಸಿಂಧೂರ ವಿಷಯಾಧಾರಿತ ಸ್ತಬ್ಧ ಚಿತ್ರಗಳು

ಈ ಎರಡೂ ವಿಷಯಗಳು ಈ ಬಾರಿ ಗಣರಾಜ್ಯೋತ್ಸವದ ಪ್ರಮುಖ ಥೀಮ್ಗಳಾಗಿದ್ದವು.

ವಿದೇಶಿ ಅತಿಥಿಗಳಾಗಿ ಯುರೋಪಿಯನ್ ನಾಯಕರು
ಪ್ರತಿ ವರ್ಷದಂತೆ ಈ ಬಾರಿ ಕೂಡ ಗಣರಾಜ್ಯೋತ್ಸವಕ್ಕೆ ವಿದೇಶಿ ಗಣ್ಯರನ್ನು ಆಹ್ವಾನಿಸಲಾಗಿತ್ತು.
ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತುಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೋ ಕೋಸ್ಟಾ ಅವರು ವಿದೇಶಿ ಅತಿಥಿಗಳಾಗಿ ಭಾಗವಹಿಸಿದರು.

ಅವರನ್ನು ಸಂಪ್ರದಾಯದಂತೆ 21 ಗನ್ ಸೆಲ್ಯೂಟ್ ಹಾಗೂ ಗಾರ್ಡ್ ಆಫ್ ಆನರ್ ಮೂಲಕ ಗೌರವಿಸಲಾಯಿತು.

ಭಾರತ–ಯುರೋಪಿಯನ್ ಯೂನಿಯನ್ ಶೃಂಗಸಭೆ ನಿರೀಕ್ಷೆ
ನಾಳೆ ನಡೆಯಲಿರುವ 16ನೇ ಭಾರತ–ಯುರೋಪಿಯನ್ ಯೂನಿಯನ್ ಶೃಂಗಸಭೆಯಲ್ಲಿ ಲೇಯೆನ್ ಹಾಗೂ ಕೋಸ್ಟಾ ಭಾಗವಹಿಸಲಿದ್ದಾರೆ.
ಈ ಶೃಂಗಸಭೆಯಲ್ಲಿ
- ಮುಕ್ತ ವ್ಯಾಪಾರ ಒಪ್ಪಂದ
- “ಮದರ್ ಆಫ್ ಆಲ್ ಡೀಲ್ಸ್” ಕುರಿತ ಮಹತ್ವದ ಚರ್ಚೆಗಳು
ನಡೆಯುವ ನಿರೀಕ್ಷೆ ಹೆಚ್ಚಾಗಿದೆ. ಇದಕ್ಕೂ ಮುನ್ನ ವಿದೇಶಾಂಗ ಸಚಿವ ಎಸ್. ಜಯಶಂಕರ್ ಅವರು ವಿದೇಶಿ ಅತಿಥಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ದೇಶದ ಜನತೆಗೆ ಪ್ರಧಾನಿ ಮೋದಿ ಶುಭಾಶಯ
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ,“ದೇಶದ ಎಲ್ಲಾ ಜನತೆಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಭಾರತದ ಹೆಮ್ಮೆ ಮತ್ತು ವೈಭವದ ಸಂಕೇತವಾದ ಈ ರಾಷ್ಟ್ರೀಯ ಹಬ್ಬವು ನಿಮ್ಮ ಜೀವನದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹ ತುಂಬಲಿ. ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪ ಇನ್ನಷ್ಟು ಬಲಗೊಳ್ಳಲಿ”
ಎಂದು ತಿಳಿಸಿದ್ದಾರೆ.




