CM ಬದಲಾವಣೆ ಬೆನ್ನಲ್ಲೇ ಸಂಪುಟ ಬದಲು – ರಾಜ್ಯದಲ್ಲಿ ನಾಲ್ವರಿಗೆ ಡಿಸಿಎಂ ಪಟ್ಟ ಸಿಗುವ ಸಾಧ್ಯತೆ.

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿಕೊಂಡಿವೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಆದ್ರೆ ಇಡೀ ಸಚಿವ ಸಂಪುಟವೇ ಪುನಾರಚನೆ ಆಗುವ ಸಾಧ್ಯತೆ ಹೆಚ್ಚಾಗಿದೆ.
ಹಳೆಯ ಸಚಿವರಿಗೆ ಕೋಕ್!
ನಿಯಮಗಳ ಪ್ರಕಾರ ಸಿಎಂ ರಾಜೀನಾಮೆ ನೀಡಿದ ತಕ್ಷಣ ಇಡೀ ಸಚಿವ ಸಂಪುಟವು ರದ್ದಾಗಲಿದ್ದು, ಸಚಿವರು ತಮ್ಮ ಸಚಿವ ಸ್ಥಾನವನ್ನು ಕಳೆದುಕೊಳ್ಳುತ್ತಾರೆ. ಹೊಸ CM ಅಧಿಕಾರವಹಿಸಿಕೊಂಡ ಬಳಿಕವೇ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹೀಗಾಗಿ ಸಚಿವ ಸಂಪುಟ ಬದಲಾಗಲಿದ್ದು, ಹಳೆಯ ಸಚಿವರಿಗೆ ಕೋಕ್ ಕೊಟ್ಟು, ಹೊಸಬರಿಗೆ ಚಾನ್ಸ್ ಕೊಡುವ ಸಾಧ್ಯತೆ ಇದೆ.

ನಾಲ್ವರಿಗೆ ಡಿಸಿಎಂ ಪಟ್ಟ ಕೊಡಬೇಕು ಎಂಬ ತೀರ್ಮಾನ
ಇನ್ನು ಸಿಎಂ ಬದಲಾವಣೆ ಹಿನ್ನೆಲೆ ಡಿ.ಕೆ ಶಿವಕುಮಾರ್ ಸಿಎಂ ಆಗಿ ಅಧಿಕಾರವಹಿಸಿಕೊಂಡರೆ, ನಾಲ್ವರಿಗೆ ಡಿಸಿಎಂ ಪಟ್ಟ ಕೊಡಬೇಕು ಎಂಬ ತೀರ್ಮಾನ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ದಲಿತ ಕೋಟಾದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅಥವಾ ಡಾ. ಜಿ. ಪರಮೇಶ್ವರ್, ಮುಸ್ಲಿಂ ಕೋಟಾದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅಥವಾ ಸ್ಪೀಕರ್ ಯು.ಟಿ. ಖಾದರ್, ಲಿಂಗಾಯತ ಕೋಟಾದಡಿ ಸಚಿವರಾದ ಈಶ್ವರ ಖಂಡ್ರೆ ಅಥವಾ ಎಂ.ಬಿ. ಪಾಟೀಲ್ ಹಾಗೂ ಅಲ್ಪಸಂಖ್ಯಾತ ಕೋಟಾದಲ್ಲಿ ಕೆ.ಜೆ. ಜಾರ್ಜ್ ಹಾಗೂ ಒಬಿಸಿ ಕೋಟಾದ ಅಡಿಯಲ್ಲಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯಗೆ ಡಿಸಿಎಂ ಸ್ಥಾನ ನೀಡಲು ಗಂಭೀರ ಚಿಂತನೆ ನಡೆದಿದೆ ಎಂದು ಹೇಳಲಾಗ್ತಿದೆ.
ಇದನ್ನು ಓದಿ : ಹೇಗಿತ್ತು ಸಿದ್ದರಾಮಯ್ಯನವರ ಸುದೀರ್ಘ ರಾಜಕಾರಣದ ಹಾದಿ? ಇಲ್ಲಿದೆ

ಅಂದು, ಇಂದು, ಎಂದೆಂದಿಗೂ ಒಗ್ಗಟ್ಟೇ ನಮ್ಮ ಶಕ್ತಿ
ಇನ್ನು, ಸಿದ್ದರಾಮಯ್ಯ ರಾಜೀನಾಮೆ ಘೋಷಣೆ ಬಳಿಕ ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಹತ್ವದ ಪೋಸ್ಟ್ ಒಂದನ್ನು ಹಂಚಿಕೊಂಡಿದೆ. ಅಂದು, ಇಂದು, ಎಂದೆಂದಿಗೂ ಒಗ್ಗಟ್ಟೇ ನಮ್ಮ ಶಕ್ತಿ. ಜನಸೇವೆಯೇ ನಮ್ಮ ಬದ್ಧತೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಮೂಲಕ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬ ಸಂದೇಶ ರವಾನಿಸಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಪರಸ್ಪರ ಆಲಿಂಗಿಸಿಕೊಂಡಿರುವ ಫೋಟೋಗಳ ಹಿನ್ನೆಲೆಯಲ್ಲಿ ಈ ಟ್ವೀಟ್ ಹೊರಬಿದ್ದಿದೆ.

ಸಿದ್ದು ಕೆಲ ಕ್ಷಣ ಭಾವುಕ
ಇನ್ನು ಸಿದ್ದು ರಾಜೀನಾಮೆ ಬೆನ್ನಲ್ಲೇ ಸಚಿವರು ಹಾಗೂ ಬೆಂಬಲಿಗರು ಕಣ್ಣೀರಾಕಿದ್ದು, ಬೆಂಬಲಿಗರ ಕಣ್ಣೀರು ಕಂಡು ಸಿದ್ದು ಕೆಲ ಕ್ಷಣ ಭಾವುಕರಾದ್ರು.

ಇದನ್ನು ನೋಡಿ : ಅರಸೀಕೆರೆಯಲ್ಲಿ ಬಕ್ರೀದ್ ಸಂಭ್ರಮ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ




