CM ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ Siddaramaiah ! ಪಕ್ಷೇತರ ಶಾಸಕನಿಂದ ಎರಡು ಬಾರಿ ಸಿಎಂ ಹುದ್ದೆಯವರೆಗೆ.

ರಾಜ್ಯ ರಾಜಕಾರಣದ ಧ್ರುವತಾರೆ, ಕೆಚ್ಚೆದೆಯ ನಾಯಕ ಸಿದ್ದರಾಮಯ್ಯ ಇದೀಗ ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಎರಡನೇ ಅವಧಿಗೆ ಸಿಎಂ ಆಗಿದ್ದ ಸಿದ್ದರಾಮಯ್ಯ ಒಟ್ಟು 8 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿರುವ ದಾಖಲೆ ಬರೆದಿದ್ದಾರೆ.

ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿರುವ ಅನುಭವಿ ರಾಜಕಾರಣಿ
ಹೌದು.. ಎರಡು ಬಾರಿ ಉಪಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದ ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿರುವ ಅನುಭವಿ ರಾಜಕಾರಣಿ. 1983ರಲ್ಲಿ ವಿಧಾನಸಭೆಗೆ ಪ್ರವೇಶಿಸಿದ ಅವರು, ಸಮಾಜವಾದಿ ಹಿನ್ನೆಲೆಯಿಂದ ಬೆಳೆದು ಬಂದ ‘ಅಹಿಂದ’ ವರ್ಗಗಳ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ರಾಜಕೀಯ ಪಯಣದ ಮುಖ್ಯ ಹಂತಗಳು
ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿ ಮೂಲದ ಸಿದ್ದರಾಮಯ್ಯ ಅವರು 1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಮೊದಲ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ನಂತರ ಜನತಾ ಪಕ್ಷ ಮತ್ತು ಜನತಾ ದಳದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದರು. ಅವರು ಜೆ.ಎಚ್. ಪಟೇಲ್ ಮತ್ತು ಧರಂಸಿಂಗ್ ಸರ್ಕಾರಗಳಲ್ಲಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ಕೃಷಿ, ಪಶುಸಂಗೋಪನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸೇರಿದಂತೆ ಹಲವು ಖಾತೆಗಳನ್ನು ನಿರ್ವಹಿಸಿದ್ದಾರೆ.
2005ರ ನಂತರ ಕಾಂಗ್ರೆಸ್ ಸೇರಿದ ಸಿದ್ದು, ಸೋನಿಯಾ ಗಾಂಧಿ ಸಮ್ಮುಖದಲ್ಲಿ ಪಕ್ಷ ಪ್ರವೇಶಿಸಿ 2006ರ ಉಪಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಗೆಲುವು ಸಾಧಿಸಿದರು. ಬಳಿಕ 2013–2018 ಮತ್ತು 2023ರಿಂದ ಪ್ರಸ್ತುತ ಅವಧಿಯವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಚುನಾವಣಾ ಹಾದಿ ಮತ್ತು ಅನುಭವ
ತಮ್ಮ ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಒಟ್ಟು 9 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಚಾಮುಂಡೇಶ್ವರಿ, ವರುಣಾ ಹಾಗೂ ಬಾದಾಮಿ ಕ್ಷೇತ್ರಗಳಿಂದ ವಿವಿಧ ಅವಧಿಗಳಲ್ಲಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ವಿರೋಧ ಪಕ್ಷದ ನಾಯಕರಾಗಿಯೂ ಅವರು ಎರಡು ಬಾರಿ ರಾಜ್ಯ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇದನ್ನು ಓದಿ : CM ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಕೆ – ರಾಜಭವನಕ್ಕೆ ಅಧಿಕೃತ ಪತ್ರ ಹಸ್ತಾಂತರ

Siddaramaiah – ರಾಜಕೀಯ ತಿರುವುಗಳು
ಇನ್ನು ಜೆಡಿಎಸ್ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಿದ್ದರಾಮಯ್ಯ, ನಂತರದ ಹಂತದಲ್ಲಿ ಪಕ್ಷದ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರಿದರು. ಆ ನಂತರದ ಚುನಾವಣಾ ಯಶಸ್ಸುಗಳು ಅವರನ್ನು ರಾಜ್ಯದ ಪ್ರಮುಖ ನಾಯಕರಾಗಿ ಸ್ಥಾಪಿಸಿತು.
ಯಾವುದೇ ಸಾಮಾಜಿಕ ಅಥವಾ ರಾಜಕೀಯ ಹಿನ್ನೆಲೆಯಿಲ್ಲದೆ ರಾಜಕಾರಣದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಯಶಸ್ಸು ಸಾಧಿಸಿರುವುದು ನಿಜಕ್ಕೂ ಒಂದು ಅದ್ಭುತ ಸಾಧನೆಯೇ ಸರಿ.

ಇದನ್ನು ನೋಡಿ : ಸಿದ್ದು ರಾಜೀನಾಮೆ ಹಿನ್ನೆಲೆ ಬೆಂಗಳೂರಿನತ್ತ ನೊಣವಿನಕೆರೆ ಸ್ವಾಮೀಜಿ




