BREAKING : ಡೈರಿ ಕಟ್ಟಡದ ಪಿಲ್ಲರ್ ಬಿದ್ದು ಬಾಲಕ ದುರ್ಮರಣ!

ಆಟವಾಡುತ್ತಿದ್ದ ಶಾಲಾ ಬಾಲಕನ ಮೇಲೆ ಏಕಾಏಕಿ ನಂದಿನಿ ಡೈರಿ ಕಟ್ಟಡದ ಪಿಲ್ಲರ್ ಕುಸಿದು ಬಿದ್ದು, ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನಡೆದಿದೆ. ಇನ್ನೂ ಪಿಲ್ಲರ್ ಕುಸಿತದಿಂದ ಬಾಲಕನ ತಲೆ ಎರಡು ಹೋಳಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಬಾಲಕನನ್ನು ಧನುಷ್ ಎಂದು ಗುರುತಿಸಲಾಗಿದೆ.
ಇದನ್ನು ಓದಿ : ವಸತಿ ಶಾಲೆಯಲ್ಲಿ ಬೆಳಗಿನ ಉಪಹಾರ ಸೇವಿಸಿ 15 ವಿದ್ಯಾರ್ಥಿಗಳು ಅಸ್ವಸ್ಥ!

ಆಟವಾಡುತ್ತಿದ್ದಾಗಲೇ ಬಾಲಕನ ತಲೆ ಮೇಲೆ ಬಿದ್ದ ಪಿಲ್ಲರ್
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿಯ ಮತ್ತಿಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಗಿಹಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ಈ ದುರ್ಘಟನೆ ನಡೆದಿದೆ. ಗ್ರಾಮದ ಕಿರಿಯ ಪ್ರಾಥಮಿಕ ಪಾಠಶಾಲೆಯ ಸಮೀಪದಲ್ಲಿರುವ ನಂದಿನಿ ಡೈರಿ ಕಟ್ಟಡದ ಬಳಿ ಧನುಷ್ ಸೇರಿದಂತೆ ಕೆಲ ಮಕ್ಕಳು ಆಟವಾಡುತ್ತಿದ್ರಂತೆ, ಈ ವೇಳೆ ಕಟ್ಟಡದ ಪಿಲ್ಲರ್ವೊಂದು ಏಕಾಏಕಿ ಕುಸಿದು ಬಾಲಕ ಧನುಷ್ ಮೇಲೆ ಬಿದ್ದಿದೆ.
ಪಿಲ್ಲರ್ ನೇರವಾಗಿ ಬಾಲಕನ ತಲೆಯ ಮೇಲೆ ಬಿದ್ದ ಪರಿಣಾಮ ಬಾಲಕನ ತಲೆ ಛಿದ್ರವಾಗಿದ್ದು, ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಈ ಘಟನೆಯಿಂದ ಇಡೀ ಗ್ರಾಮವೇ ಬೆಚ್ಚಿಬಿದ್ದಿದ್ದು, ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ತಪ್ಪಿತಸ್ಥರ ವಿರುದ್ಧ ಕ್ರಮ
ಸದ್ಯ ಘಟನೆ ನಡೆದ ಸ್ಥಳದಲ್ಲಿ ಇದೀಗ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಹಂದನಕೆರೆ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಶಾಲೆಯ ಪಕ್ಕದಲ್ಲೇ ಅಪಾಯಕಾರಿ ಸ್ಥಿತಿಯಲ್ಲಿದ್ದ ಕಟ್ಟಡದ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದೇ ದುರ್ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದು, ಕೂಡಲೇ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನು ನೋಡಿ : ಏಕಾಏಕಿ ಎದುರಿಗೆ ಬಂದ ಕಾರು – ಕಾಲುವೆಗೆ ಉರುಳಿಬಿದ್ದ ಸರ್ಕಾರಿ ಬಸ್




