Bengaluru : ಐಸ್ಕ್ರೀಂ ಬೇಕಂತ ಹಠ ಮಾಡಿದ್ದಕ್ಕೆ ಮಗುವಿಗೆ ಒದ್ದು, ಉಸಿರುಗಟ್ಟಿಸಿ ಕೊಲೆ: ಪೊಲೀಸರ ಬಳಿ ಸತ್ಯ ಬಿಚ್ಚಿಟ್ಟ ಆರೋಪಿ ಮೋಹನ್

ಕಾಡುಗೋಡಿಯಲ್ಲಿ ತಾಯಿ ಹಾಗೂ ಪ್ರಿಯಕರ ಸೇರಿ ಮಗಳ ಕೊಲೆ ಮಾಡಿದ ಪ್ರಕರಣ ದಿನದಿಂದ ದಿನಕ್ಕೆ ಬೇರೆ ಬೇರೆ ಆಯಾಮ ಪಡೆದುಕೊಳ್ತಿದೆ. ಈ ನಡುವೆ ಆರೋಪಿ ಮೋಹನ್ ನನ್ನ ಹತ್ತು ದಿನಗಳ ಕಾಲ ಕಸ್ಟಡಿಗೆ ಪಡೆದಿರೋ ಪೊಲೀಸ್ರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆರೋಪಿ ಮೋಹನ್, ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು, ಆತನ ಕ್ರೂರತೆ ಕೇಳಿ ಪೊಲೀಸ್ರೇ ಶಾಕ್ ಆಗಿದ್ದಾರೆ.
ಐಸ್ಕ್ರೀಂ ಬೇಕಂತ ಹಠ ಮಾಡಿದ್ದಕ್ಕೆ ಮಗುವಿನ ಕೊಲೆ
ಮಾರ್ಚ್ 21ರಿಂದ ಮೂರು ದಿನಗಳ ಕಾಲ ಮಧುರೈನ ದೇವಸ್ಥಾನಗಳಿಗೆ ಪ್ರಿಯಾಂಕ ಹಾಗೂ ಆಕೆಯ ಪ್ರಿಯಕರ ಮೋಹನ್ ಪ್ರವಾಸ ತೆರಳಿದ್ದು, ಟ್ರಿಪ್ ಮುಗಿಸಿ 24 ನೇ ತಾರೀಖು ಬೆಂಗಳೂರಿಗೆ ವಾಪಸ್ ಆಗಿದ್ದರು. ಅಂದು ಪ್ರಿಯಾಂಕ ಶಾಪಿಂಗ್ ಮಾಡ್ಬೇಕು ಅಂದಿದ್ಲಂತೆ. ಆಗ ಇಂದಿರಾನಗರದಲ್ಲಿ ರಾತ್ರಿ ಎಂಟು ಗಂಟೆ ವೇಳೆಗೆ ಪ್ರಿಯಾಂಕ ಶಾಪಿಂಗ್ ಹೋಗಿದ್ದು, ಮೋಹನ್ ಮತ್ತು ಮಗು ವೆನ್ನಿಲ್ಲಾ ಕಾರಿನಲ್ಲೇ ಇದ್ರು ಎನ್ನಲಾಗಿದೆ. ಈ ವೇಳೆ ಮಗು ವೆನ್ನಿಲ್ಲಾ, ತನಗೆ ಐಸ್ ಕ್ರೀಂ ಬೇಕು ಅಂತಾ ಮೋಹನ್ ಬಳಿ ಕೇಳಿದ್ದಳಂತೆ. ಹಾಗಾಗಿ ಮಗುವಿಗಾಗಿ ಮೋಹನ್ ಐಸ್ ಕ್ರೀಂ ತಂದುಕೊಟ್ಟಿದ್ದನಂತೆ.

ಕಾಲಿನಿಂದ ಒದ್ದು, ಉಸಿರುಗಟ್ಟಿಸಿ ಕೊಲೆ
ಆದ್ರೆ ಈ ಐಸ್ ಕ್ರೀಂ ಬೇಡ ಬೇರೆ ಬೇಕೆಂದು ಪಟ್ಟು ಹಿಡಿದ ಮಗು ಅಳಲು ಶುರುಮಾಡಿತ್ತಂತೆ. ಈ ನಡುವೆ ಸಿಟ್ಟಿಗೆದ್ದ ಮೋಹನ್, ಮಗುವಿನ ಮೇಲೆ ಹಲ್ಲೆ ನಡೆಸಿದ್ದಾನೆ. ಕಾಲಿನಿಂದ ಮಗುವಿನ ಹೊಟ್ಟೆ ಭಾಗಕ್ಕೆ ಬಲವಾಗಿ ಒದ್ದಿದ್ದನಂತೆ. ಈ ವೇಳೆ ಜೋರಾಗಿ ಕಿರುಚಾಡಿದ್ದ ಮಗು, ಹಿಂಬದಿ ಕಾರಿನ ಸೀಟ್ ನಲ್ಲಿ ನೋವಿನಿಂದ ಒದ್ದಾಡಿತಂತೆ. ಆಗ ಹೊರಗಿನವ್ರಿಗೆ ಗೊತ್ತಾಗಬಾರ್ದು ಅಂತ ಮಗುವಿನ ಬಾಯಿಯನ್ನ ಎರಡೂ ಕೈಯಲ್ಲಿ ಅದುಮಿಟ್ಟುಕೊಂಡಿದ್ದನಂತೆ, ಈ ವೇಳೆ ಉಸಿರಾಟವಾಡದೆ ಮಗು ಮೃತಪಟ್ಟಿದೆ. ಹೀಗಂತಾ ಆರೋಪಿ ಮೋಹನ್ ಪೊಲೀಸರ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾನೆ.
ಇದನ್ನು ಓದಿ : ಪ್ರಿಯಕರನ ಜೊತೆ ಸೇರಿ 6 ವರ್ಷದ ಮಗಳ ಕೊಲೆ..?

ಉದ್ದೇಶಪೂರ್ವಕವಾಗಿಯೇ ಮಗುವನ್ನು ಕೊಲೆ
ಪೊಲೀಸರ ತನಿಖೆಯಲ್ಲಿ ಉದ್ದೇಶಪೂರ್ವಕವಾಗಿಯೇ ಮಗುವನ್ನು ಕೊಲೆ ಮಾಡಿರೋದು ಗೊತ್ತಾಗಿದೆ. ಶಾಪಿಂಗ್ ಮುಗಿಸಿ ಕಾರಿನ ಬಳಿ ವಾಪಸ್ ಆಗಿದ್ದ ಪ್ರಿಯಾಂಕ ಬಳಿ ನಡೆದ ವಿಚಾರವನ್ನು ಹೇಳಿ ಆಕಸ್ಮಿಕವಾಗಿ ನಡೆದೋಯ್ತು ಅಂತ ಮೋಹನ್ ಕಥೆ ಕಟ್ಟಿದ್ದಾನೆ. ಆ ಬಳಿಕ ಕಾರಿನಲ್ಲಿ ಕಾಡುಗೋಡಿಯ ವಿಲ್ಲಾಗೆ ಮಗುವನ್ನು ಕೊಂಡೊಯ್ದಿದ್ದಾರೆ. ಮಗು ಮಲಗಿರೋ ರೀತಿ ಭುಜದ ಮೇಲೆ ಮಲಗಿಸಿಕೊಂಡು ವಿಲ್ಲಾ ಒಳಗೆ ಹೋಗಿದ್ದಾರೆ. ರಾತ್ರಿಯೆಲ್ಲಾ ಮೃತ ಮಗುವನ್ನು ಮನೆಯಲ್ಲೇ ಮಲಗಿಸಿದ್ದ ಪ್ರಿಯಾಂಕ, ಮೋಹನ್ ಮುಂದಿನ ಸಂಚು ರೂಪಿಸಿದ್ದಾರೆ. ಬಳಿಕ ಬೆಳಗ್ಗೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಮಲಗಿದ್ದ ಮಗು ಎದ್ದಿಲ್ಲ. ಮೆಟ್ಟಿಲ ಮೇಲಿಂದ ಬಿದ್ದಿತ್ತು, ಮಲಗಿಸಿದ್ವಿ ಅಂತ ಆಸ್ಪತ್ರೆಯಲ್ಲಿ ಕಥೆ ಕಟ್ಟಿದ್ದಾರೆ. ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳ್ತಿದ್ದಂತೆ ಪ್ರಿಯಾಂಕ ಗೋಳಾಡಿ ಹೈಡ್ರಾಮ ಮಾಡಿ ಅನುಮಾನ ಬಾರದ ರೀತಿ ನಡೆದುಕೊಂಡಿದ್ದಳಂತೆ.
ಮಗಳ ಸಾವಿಗೆ ಕಾರಣಳಾದ ನಿಷ್ಕರುಣಿ ತಾಯಿ
ಆ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಅಂತ್ಯಕ್ರಿಯೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ಸಾವಿನ ಬಗ್ಗೆ ಉಲ್ಲೇಖವಾದ ಬಳಿಕ,ತಂದೆ ಪ್ರವೀಣ್ ಹೋರಾಟ ನಡೆಸಿ ಕೇಸ್ ದಾಖಲಿಸಿದ್ದಾರೆ. ಮಗಳ ಸಾವಿಗೆ ಕಾರಣಳಾದ ನಿಷ್ಕರುಣಿ ತಾಯಿ ಪ್ರಿಯಾಂಕ ಹೊರರಾಜ್ಯದಲ್ಲಿ ತಲೆಮರೆಸಿಕೊಂಡಿದ್ದು,ಕಾಡುಗೋಡಿ ಪೊಲೀಸರು. ಹುಡುಕಾಟ ಮುಂದುವರೆಸಿದ್ದಾರೆ. ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಅನ್ನೋ ಹಾಗೆ ಮುಗ್ದ ಮಗುವಿನ ಸಾವಿಗೆ ಕಾರಣರಾದ ಈ ನೀಚರಿಗೆ ಶಿಕ್ಷೆಯಾಗಬೇಕಿದೆ.

ಇದನ್ನು ನೋಡಿ : ಲಿಂಕ್ ಕೆನಾಲ್ಗೆ SURESH GOWDA ಷರತ್ತು – 58 ಕೆರೆ ತುಂಬಿಸಿ ಬಳಿಕ ನೀರು ಕೊಂಡೊಯ್ಯಿ!




