ನಟಿ Shakeela ಕುತ್ತಿಗೆಗೆ ಶಸ್ತ್ರ ಚಿಕಿತ್ಸೆ – ಅತಿಯಾದ ಮೊಬೈಲ್ ಬಳಕೆ ತಂದಿತು ಜೀವಕ್ಕೆ ಕುತ್ತು!

ನಟಿ ಶಕೀಲಾ ಅವರಿಗೆ ಕುತ್ತಿಗೆ ನೋವು ಹಾಗೂ ನರ ಸಂಬಂಧಿತ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಅತಿಯಾದ ಮೊಬೈಲ್ ಫೋನ್ ಬಳಕೆಯಿಂದ ತಮ್ಮ ಆರೋಗ್ಯ ಹದಗೆಟ್ಟಿದೆ ಎಂದು ಶಕೀಲಾ ಸ್ವತಃ ಹೇಳಿಕೊಂಡಿದ್ದು, ಅಭಿಮಾನಿಗಳಿಗೂ ಎಚ್ಚರಿಕೆ ನೀಡಿದ್ದಾರೆ.
ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಜನಪ್ರಿಯತೆ
ಒಂದು ಕಾಲದಲ್ಲಿ ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಆದ ಜನಪ್ರಿಯತೆ ಗಳಿಸಿದ್ದ ಶಕೀಲಾ, ಬಳಿಕ ಸಾಫ್ಟ್ಕೋರ್ ಚಿತ್ರಗಳಿಂದ ದೂರ ಸರಿದು ತಮಿಳು ಸಿನಿಮಾಗಳಲ್ಲಿ ಹಾಸ್ಯ ಸೇರಿದಂತೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡರು. ಜಯಂ, ಅಳಗಿಯ ತಮಿಳ್ ಮಗನ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಅವರು, ಕಿರುತೆರೆ ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದಾರೆ. ಕನ್ನಡದ ಬಿಗ್ಬಾಸ್ ಕಾರ್ಯಕ್ರಮದಲ್ಲಿಯೂ ಶಕೀಲಾ ಕಾಣಿಸಿಕೊಂಡಿದ್ದರು.
ಇದನ್ನು ಓದಿ : ರನ್ಯಾ ರಾವ್ ಪ್ರಕರಣ – CCTV ದೃಶ್ಯ ನೀಡಲು ಹೈಕೋರ್ಟ್ ಸೂಚನೆ

ಅತಿಯಾದ ಮೊಬೈಲ್ ಬಳಕೆಯಿಂದ ಆರೋಗ್ಯ ಸಮಸ್ಯೆ
ಇತ್ತೀಚೆಗೆ ಕುತ್ತಿಗೆಯಲ್ಲಿ ತೀವ್ರ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಕೀಲಾ ಆಸ್ಪತ್ರೆಗೆ ದಾಖಲಾಗಿದ್ದರು. ಮೆಡ್ವೇ ಆಸ್ಪತ್ರೆಯ ಡಾ. ಬಾಲಮುರುಗನ್ ಅವರ ನೇತೃತ್ವದಲ್ಲಿ ಅವರಿಗೆ ಕುತ್ತಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದ ದೃಶ್ಯಗಳು ಹಾಗೂ ಶಸ್ತ್ರಚಿಕಿತ್ಸೆಯ ಬಳಿಕ ಮನೆಗೆ ಮರಳಿದ ಕ್ಷಣಗಳನ್ನು ಒಳಗೊಂಡ ವಿಡಿಯೋವನ್ನು ಶಕೀಲಾ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದ್ದಾರೆ.
ಸದ್ಯ ಕುತ್ತಿಗೆಗೆ ಕಾಲರ್ ಬೆಲ್ಟ್ ಧರಿಸಿರುವ ಶಕೀಲಾ, ಹಾಸಿಗೆಯಿಂದ ಏಳಲು ಹಾಗೂ ಊಟ ಮಾಡಲು ಇತರರ ಸಹಾಯ ಪಡೆಯಬೇಕಾದ ಪರಿಸ್ಥಿತಿಯಲ್ಲಿದ್ದಾರೆ.

ದಿನಕ್ಕೆ 4 ಗಂಟೆ ಮೊಬೈಲ್ನಲ್ಲಿ ಗೇಮ್ಸ್
ತಮ್ಮ ಆರೋಗ್ಯ ಸಮಸ್ಯೆಗೆ ಅತಿಯಾದ ಮೊಬೈಲ್ ಬಳಕೆ ಪ್ರಮುಖ ಕಾರಣವಾಗಿರಬಹುದು ಎಂದು ಶಕೀಲಾ ತಿಳಿಸಿದ್ದಾರೆ. ದಿನಕ್ಕೆ ಸುಮಾರು ನಾಲ್ಕು ಗಂಟೆಗಳ ಕಾಲ ಮೊಬೈಲ್ನಲ್ಲಿ ಗೇಮ್ಸ್ ಆಡುವ ಅಭ್ಯಾಸವಿತ್ತು.
ಮೊಬೈಲ್ ಫೋನ್ ದೈನಂದಿನ ಜೀವನದಲ್ಲಿ ಅತ್ಯಂತ ಉಪಯುಕ್ತ ಸಾಧನವಾಗಿದ್ದರೂ, ಅದನ್ನು ಮಿತಿಮೀರಿ ಬಳಸಬಾರದು ಎಂದು ಅವರು ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.
ಆಸ್ಪತ್ರೆಯಿಂದಲೇ ಅಭಿಮಾನಿಗಳಿಗೆ ಮನವಿ ಮಾಡಿದ ನಟಿ Shakeela
ಸೋಶಿಯಲ್ ಮಿಡಿಯಾಗಳಲ್ಲಿ ಹೆಚ್ಚು ಸಮಯ ಕಳೆಯುವುದನ್ನು ಕಡಿಮೆ ಮಾಡುವಂತೆ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿರುವ ಶಕೀಲಾ, ಫೋನ್ ಅನ್ನು ಕೇವಲ ಅತ್ಯಗತ್ಯ ಉದ್ದೇಶಗಳಿಗೆ ಮಾತ್ರ ಬಳಸಿ ಮತ್ತು ಮಕ್ಕಳ ಕೈಗೆ ಫೋನ್ ನೀಡುವುದನ್ನು ಸಂಪೂರ್ಣವಾಗಿ ತಪ್ಪಿಸಿ ಎಂದು ಕಿವಿಮಾತು ಹೇಳಿದ್ದಾರೆ. ಅತಿ ಹೆಚ್ಚು ಸ್ಮಾರ್ಟ್ಫೋನ್ ಬಳಕೆ ಮಾಡುವ ಪ್ರತಿಯೊಬ್ಬರಿಗೂ ಈ ಘಟನೆಯು ಕಣ್ಣು ತೆರೆಸುವ ಎಚ್ಚರಿಕೆಯ ಪಾಠವಾಗಿದೆ.

ಇದನ್ನು ನೋಡಿ : ತಪ್ಪು ಮಾಹಿತಿ ನೀಡಿದ್ರೆ ಶಿಸ್ತು ಕ್ರಮ – ಅಧಿಕಾರಿಗಳಿಗೆ DCM ಖಡಕ್ ಎಚ್ಚರಿಕೆ




