ವೆನಿಲ್ಲಾ Murder ಕೇಸ್ಗೆ ಟ್ವಿಸ್ಟ್ – ತನಿಖಾ ಲೋಪಕ್ಕೆ ಇನ್ಸ್ ಪೆಕ್ಟರ್ ಸೇರಿ ಮೂವರು ಅಮಾನತು

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕಾಡುಗೋಡಿಯ ವೆನಿಲ್ಲಾ ಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ಸ್ಫೋಟಕ ಮಾಹಿತಿ ಹೊರಬರುತ್ತಿದೆ. ಒಂದು ಕಡೆ ಹತ್ಯೆ ಪ್ರಕರಣದ ತನಿಖೆ ತೀವ್ರಗೊಂಡಿದ್ದರೆ, ಮತ್ತೊಂದೆಡೆ ತನಿಖೆಯಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಕಾಡುಗೋಡಿ ಠಾಣೆಯ ಇನ್ಸ್ಪೆಕ್ಟರ್, ಪಿಎಸ್ಐ ಹಾಗೂ ಓರ್ವ ಕಾನ್ಸ್ಟೇಬಲ್ರನ್ನು ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ.
ಇನ್ಸ್ಪೆಕ್ಟರ್ ಸೇರಿ ಮೂವರು ಅಮಾನತು
ಜೂನ್ 4ರಂದು ಹತ್ಯೆ ಪ್ರಕರಣ ದಾಖಲಾಗಿದ್ದರೂ, ಮಗು ಸಾವನ್ನಪ್ಪಿದ ಬಳಿಕ ಆರಂಭದಲ್ಲಿ ಯುಡಿಆರ್ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಹತ್ಯೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣದ ಮರು ತನಿಖೆ ಆರಂಭಗೊಂಡಿತ್ತು. ತನಿಖೆಯಲ್ಲಿ ಅಧಿಕಾರಿಗಳ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಕಾಡುಗೋಡಿ ಇನ್ಸ್ಪೆಕ್ಟರ್ ಆಗಿದ್ದ ರಂಗಸ್ವಾಮಿ, ಪಿಎಸ್ಐ ನಿಂಗರಾಜು, ಹಾಗೂ ಓರ್ವ ಕಾನ್ಸ್ಟೇಬಲ್ ಸಸ್ಪೆಂಡ್ ಮಾಡಿ ಆದೇಶಿಸಲಾಗಿದೆ. ಜೊತೆಗೆ ಪ್ರಕರಣದ ಸಂಪೂರ್ಣ ತನಿಖೆಗೆ ಹೊಸ ತನಿಖಾಧಿಕಾರಿ ಗೋವರ್ಧನ್ ಅವರನ್ನು ನೇಮಕ ಮಾಡಲಾಗಿದೆ.
ಇದನ್ನು ಓದಿ : 6 ವರ್ಷದ ವೆನ್ನಿಲಾ ಮರ್ಡರ್ ಕೇಸ್ಗೆ ಬಿಗ್ ಟ್ವಿಸ್ಟ್!

ಆರೋಪಿಗಳೊಂದಿಗೆ ಕ್ರೈಂ ಸೀನ್ ರೀ-ಕ್ರಿಯೇಷನ್
ಇನ್ನು ಪ್ರಕರಣದ ತನಿಖೆ ವೇಳೆ ಮತ್ತೊಂದು ಬೆಚ್ಚಿಬೀಳಿಸುವ ಅಂಶ ಬೆಳಕಿಗೆ ಬಂದಿದೆ. ಮಗುವನ್ನು ಬೋರ್ಡಿಂಗ್ ಶಾಲೆಗೆ ಸೇರಿಸುವ ವಿಚಾರವಾಗಿ ಪ್ರಿಯಾಂಕಾ ಮತ್ತು ಆಕೆಯ ಪ್ರಿಯಕರ ಮೋಹನ್ ನಡುವೆ ಆಗಾಗ ಜಗಳ ನಡೆಯುತ್ತಿತ್ತೆಂಬ ಮಾಹಿತಿ ಲಭ್ಯವಾಗಿದೆ. ಅಲ್ದೇ ತನಿಖೆಯ ಭಾಗವಾಗಿ ಪೊಲೀಸರು ಆರೋಪಿಗಳೊಂದಿಗೆ ಕ್ರೈಂ ಸೀನ್ ರೀ-ಕ್ರಿಯೇಷನ್ ನಡೆಸಿದ್ದಾರೆ. ಈ ವೇಳೆ ಮೋಹನ್, ಮಗು ಹತ್ಯೆ ಹೇಗೆ ನಡೆದಿದೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.
ಕೊಲೆಯಲ್ಲಿ ತಾಯಿಯ ಪಾತ್ರ ಏನು..?
ಇನ್ನು ಕೊಲೆ ನಡೆದ ಬಳಿಕ ಎಲ್ಲವೂ ಸಹಜ ಸಾವಿನಂತೆ ಕಾಣುವಂತೆ ಮಾಡಲು ಆರೋಪಿಗಳು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಮಗುವಿನ ಶವಕ್ಕೆ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಆಸ್ಪತ್ರೆಗೆ ಕರೆದೊಯ್ದಿದ್ದು, ಬಳಿಕ ಮಗು ಫುಡ್ ಪಾಯಿಸನ್ನಿಂದ ಸಾವನ್ನಪ್ಪಿದೆ ಎಂದು ಬಿಂಬಿಸಲು ಯತ್ನಿಸಿದ್ದರು. ಆದರೆ ಪೋಸ್ಟ್ಮಾರ್ಟಂ ವರದಿ ಆರೋಪಿಗಳ ಸಂಪೂರ್ಣ ಸಂಚನ್ನು ಬಯಲಿಗೆಳೆದಿದೆ. ಸದ್ಯ ಮೋಹನ್ ವಿಚಾರಣೆ ಬಹುತೇಕ ಪೂರ್ಣಗೊಂಡಿದ್ದು, ಈಗ ಪ್ರಿಯಾಂಕಾಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಕೊಲೆಯಲ್ಲಿ ಆಕೆಯ ಪಾತ್ರ ಏನು..? ಸಾಕ್ಷ್ಯ ನಾಶ ಮಾಡಲು ಯಾರು ಸಂಚು ರೂಪಿಸಿದ್ದರು..? ಎಂದು ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಒಟ್ನಲ್ಲಿ ವೆನಿಲ್ಲಾ ಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ರಹಸ್ಯ ಹೊರಬೀಳುತ್ತಿದ್ದು, ತನಿಖೆ ಮುಂದುವರಿದಂತೆ ಇನ್ನಷ್ಟು ಸ್ಫೋಟಕ ಮಾಹಿತಿಗಳು ಹೊರಬರುವ ಸಾಧ್ಯತೆ ಇದೆ.
ಇದನ್ನು ನೋಡಿ : ತುಮಕೂರಿನಲ್ಲೊಂದು HIT AND RUN ಪ್ರಕರಣ – ಆಸ್ಪತ್ರೆಗೆ ಸೇರಿಸ್ತೀನಿ ಅಂತೇಳಿ ರಸ್ತೆಯಲ್ಲೇ ಬಿಟ್ಟು ಹೋದ ಚಾಲಕ..!





