Tumkur : ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲವಾಗುವಂತೆ ಪಡಿತರ ನ್ಯಾಯಬೆಲೆ ಅಂಗಡಿಗಳನ್ನು ರಾತ್ರಿವರೆಗೂ ತೆರೆದಿರಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ ನೀಡಿದ್ದಾರೆ.

Tumkur: ಎಲ್ಲಾ ನ್ಯಾಯಬೆಲೆ ಅಂಗಡಿಗಳನ್ನು ರಾತ್ರಿ 8 ಗಂಟೆಯವರೆಗೆ ತೆರೆಯುವಂತೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕಿ ಸೌಮ್ಯ ಅವರಿಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಆದೇಶಿಸಿದ್ದಾರೆ.
ಗುಬ್ಬಿಯ ಜಿ. ಹೊಸಹಳ್ಳಿಯಲ್ಲಿ ಆಯೋಜಿಸಿದ್ದ ಆಹಾರ ಅದಾಲತ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅವರು, ಸಂಜೆ 6 ಗಂಟೆಯ ಮೇಲೆ ಕೆಲಸದಿಂದ ಬರುವ ಮಹಿಳೆಯರಿಗೆ ಪಡಿತರ ಧಾನ್ಯ ಪಡೆಯಲು ಆಗುತ್ತಿರುವ ತೊಂದರೆ ಹಿನ್ನಲೆ ರಾತ್ರಿ 8ರವರೆಗೂ ತೆರೆಯುವಂತೆ ಸೂಚಿಸಿದರು.
ಹೋಬಳಿ ಮಟ್ಟದಲ್ಲಿ ಆಹಾರ ಅದಾಲತ್
ಗ್ರಾಹಕರ ಕುಂದು ಕೊರತೆಗಳ ನಿವಾರಣೆಗಾಗಿ ಜಿಲ್ಲಾ ಕೇಂದ್ರ ತುಮಕೂರಿಗೆ ಬರುವುದನ್ನ ತಪ್ಪಿಸಲು ಹೋಬಳಿ ಮಟ್ಟದಲ್ಲಿ ಆಹಾರ ಅದಾಲತ್ ಅನ್ನು ನಡೆಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಪಡಿತರ ವಿತರಣೆಯಲ್ಲಿ ತೂಕ ವ್ಯತ್ಯಾಸ, ಬಯೋಮೆಟ್ರಿಕ್ ಹೊಂದಾಣಿಕೆ, ಚೀಟಿ ರದ್ದು, ಅನರ್ಹರನ್ನು ಕೈ ಬಿಡುವುದು, ಹೊಸದಾಗಿ ಸದಸ್ಯರನ್ನು ಸೇರ್ಪಡೆ ಮಾಡುವುದು ಸೇರಿದಂತೆ ಹಲವಾರು ಅಹವಾಲುಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿದರು.
ಇನ್ನು ಪ್ರತಿ ತಿಂಗಳು ನಿಗದಿತ ಅವಧಿಯಲ್ಲಿ ಪಡಿತರ ಧಾನ್ಯ ಸಾರ್ವಜನಿಕರಿಗೆ ವಿತರಣೆ ಮಾಡಬೇಕು ಎಂದು ಸೂಚಿಸಿದರು.

ಅನ್ನ ಸುವಿಧ ಯೋಜನೆಗೆ ಉತ್ತೇಜನ
75 ವರ್ಷ ಮೀರಿದ ಏಕಸದಸ್ಯ ವಯೋವೃದ್ಧರಿಗೆ ಮನೆಬಾಗಿಲಿಗೆ ಪಡಿತರ ಧಾನ್ಯ ಒದಗಿಸುವ ‘ಅನ್ನ ಸುವಿಧ’ ಯೋಜನೆ ಪ್ರೋತ್ಸಾಹಿಸುತ್ತಿದ್ದು, ಜಿಲ್ಲೆಯಲ್ಲಿ 12,000 ಕ್ಕೂ ಹೆಚ್ಚು 75 ವರ್ಷ ಮೇಲ್ಪಟ್ಟ ಪಡಿತರ ಚೀಟಿದಾರರಿದ್ದಾರೆ.
ಈಗಾಗಲೇ 2,000 ಜನರಿಗೆ ಮನೆ ಬಾಗಿಲಿಗೇ ಪಡಿತರ ವಿತರಣೆ ಆಗುತ್ತಿದೆ. ಸ್ಥಳದಲ್ಲಿದ್ದ 75 ವರ್ಷದ ನೀಲಮ್ಮ ಅವರಿಗೆ ಬಯೋಮೆಟ್ರಿಕ್ ವಿನಾಯಿತಿ ನೀಡಿ ಮನೆಗೆ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಇದನ್ನೂ ಓದಿ: ಅನ್ನಭಾಗ್ಯ 5 ಕೆಜಿ ಅಕ್ಕಿಯ ಜೊತೆಗೆ ಇಂದಿರಾ ಕಿಟ್ ನೀಡಲು ರಾಜ್ಯ ಸರ್ಕಾರದ ಆದೇಶ!
ಅನರ್ಹರಿಗೆ ಪಡಿತರ ನೀಡಿದರೆ ಕಠಿಣ ಕ್ರಮ
ಅನರ್ಹ ಫಲಾನುಭವಿಗಳಿಗೆ ಪಡಿತರ ವಿತರಣೆಯಾದರೆ ಆಹಾರ ನಿರೀಕ್ಷಕರೇ ನೇರ ಹೊಣೆಗಾರರು ಎಂದು ಎಚ್ಚರಿಸಿದರು. ಪಡಿತರ ಚೀಟಿಯಲ್ಲಿರುವ ಸದಸ್ಯರ ಸಂಖ್ಯೆಗನುಗುಣವಾಗಿ ಕಡ್ಡಾಯವಾಗಿ ನಿಗದಿತ ಪ್ರಮಾಣದ ಧಾನ್ಯ ವಿತರಿಸಬೇಕು ಎಂದರು.

ಬಯೋಮೆಟ್ರಿಕ್ ಸಮಸ್ಯೆಗೆ ಪರಿಹಾರ
ಬಯೋಮೆಟ್ರಿಕ್ ಸಮಸ್ಯೆಯಾದರೆ ಐರಿಸ್ ಯಂತ್ರಗಳನ್ನು ಅಳವಡಿಸುವಂತೆ ಸೂಚಿಸಿ, ಸ್ಥಳೀಯ ನಿವಾಸಿಗಳ ಮನೆಗೆ ಭೇಟಿ ನೀಡಿ ಪಡಿತರ ಧಾನ್ಯ ವಿತರಿಸಿದರು. ನ್ಯಾಯಬೆಲೆ ಅಂಗಡಿ ಮತ್ತು ಸರ್ಕಾರಿ ಶಾಲೆಯನ್ನು ಪರಿಶೀಲಿಸಿದರು.
ಈ ವೇಳೆ ಉಪವಿಭಾಗಾಧಿಕಾರಿ ನಹೀದಾ ಜಮ್ ಜಮ್, ತಹಶೀಲ್ದಾರ್ ಆರತಿ, ಉಪ ತಹಶೀಲ್ದಾರ್ ಯಶೋಧಮ್ಮ, ಆಹಾರ ನಿರೀಕ್ಷಕ ಸಿದ್ದೇಗೌಡ, ಪಿಡಿಓ ಕವಿತಾ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
MUST WATCH : TUMAKURU DC | ಪಿಎಂ-15 ಪ್ರಗತಿ ಪರಿಶೀಲನಾ ಸಭೆ ಅಧಿಕಾರಿಗೆ DC ಖಡಕ್ ವಾರ್ನಿಂಗ್




