
PAVAGADA :ಇತ್ತೀಚಿನ ದಿನಗಳಲ್ಲಿ ತಾಯಂದಿರು ಚಿಕ್ಕಪುಟ್ಟ ಕಾರಣಗಳಿಗೆ ಹೆತ್ತ ಮಕ್ಕಳನ್ನು ಸಾಯಿಸಿ, ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇತ್ತ ತುಮಕೂರು ಜಿಲ್ಲೆಯಲ್ಲಿಯೂ ಇಂತಹ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಪಾವಗಡ ತಾಲೂಕಿನಲ್ಲಿ ಹೆತ್ತ ತಾಯಿಯೊಬ್ಬಳು ಪ್ರಪಂಚದ ಅರಿವೇ ಇರದ ತನ್ನ ಇಬ್ಬರು ಮಕ್ಕಳನ್ನು ಸಾಯಿಸಿ, ಕಡೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಪಾವಗಡ ತಾಲೂಕಿನ ಕಡಪಲ ಕೆರೆಯಲ್ಲಿ ಇಂತಹದೊಂದು ಮನಕಲಕುವ ಘಟನೆ ನಡೆದಿದ್ದು, ಊರಿನ ಜನರೆಲ್ಲರೂ ತಾಯಿ, ಮಕ್ಕಳ ಸಾವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಇತ್ತ ಕುಟುಂಬಸ್ಥರು ತಾಯಿ ಮಕ್ಕಳ ಶವವನ್ನು ನೋಡಿ ಒಂದು ಕ್ಷಣ ಬೆಚ್ಚಿಬಿದ್ದಿದ್ದು, ಕಂಗಾಲಾಗಿದ್ದಾರೆ. ಇನ್ನು ಮೃತ ತಾಯಿಯನ್ನು 25 ವರ್ಷದ ಸರಿತಾ ಎನ್ನಲಾಗಿದ್ದು, ಕಡಪಲ ಕೆರೆಯಲ್ಲಿ ಗಂಡ ಸಂತೋಷ್ ನೊಂದಿಗೆ ಸುಖ ಸಂಸಾರವನ್ನು ನಡೆಸುತ್ತಿದ್ದಳು. ಇನ್ನು ಪ್ರಪಂಚದ ಅರಿವೇ ಇರದ ತನ್ನ ಒಂದೂವರೆ ವರ್ಷ ಹಾಗೂ 4 ವರ್ಷದ ಮಕ್ಕಳನ್ನು ಕತ್ತು ಹಿಸುಕಿ ಸಾಯಿಸಿ, ಕೊನೆಗೆ ಸರಿತಾಳು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತ ಸರಿತಾಳ ಗಂಡ ಸಂತೋಷ್ ಲಗೇಜ್ ಆಟೋ ಓಡಿಸಿಕೊಂಡು ಹೆಂಡತಿ, ಮಕ್ಕಳನ್ನು ಸಾಕುತ್ತಿದ್ದ. ಸರಿತಾಳ ಅತ್ತೆಯು ಕೂಡ ಸಂಸಾರ ಸಾಗಿಸಲು ಕೂಲಿ ಕೆಲಸವನ್ನು ಮಾಡುತ್ತಿದ್ದಳು ಎನ್ನಲಾಗಿದೆ. ಇನ್ನು ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ಮಂಜುನಾಥ್ ಹಾಗೂ ಸ್ಥಳೀಯ ಪೊಲೀಸರು ಮಾಹಿತಿ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಸರಿತಾ ತನ್ನ ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಅನ್ನೋ ಪ್ರಶ್ನೆಗಳು ಮೂಡುತ್ತಿದ್ದು, ಪೊಲೀಸರ ತನಿಖೆಯಿಂದ ಮಾತ್ರ ಸತ್ಯಾಸತ್ಯತೆ ಹೊರ ಬೀಳಬೇಕಿದೆ.ಇತ್ತ ಮೃತ ಕುಟುಂಬದ ರೋಧನೆ ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ.




