
GUBBI : ರಾತ್ರೋರಾತ್ರಿ ಮನೆಗೆ ನುಗ್ಗಿದ ದರೋಡೆಕೋರರು ಬರೋಬ್ಬರಿ 22 ಲಕ್ಷ ಬೆಲೆ ಬಾಳುವ 280 ಗ್ರಾಂ ಚಿನ್ನದ ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಬಡವನ ಪಾಳ್ಯ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ನಿಟ್ಟೂರು ಹೋಬಳಿಯ ಬಡವನಪಾಳ್ಯ ಗ್ರಾಮದ ನಿವಾಸಿ ಆನಂದ ಬಿನ್ ಬೋರಯ್ಯ ಎಂಬಾತ ತನ್ನ ಹೆಂಡತಿ ಪುಟ್ಟಮ್ಮ ಎಂಬಾಕೆಯ ಜೊತೆ ತನ್ನ ಮಗಳು ಶೃತಿ ಎಂಬಾಕೆಯ ಹೆರಿಗೆಯ ಸಮಯದ ನಿಮಿತ್ತ, ಇಬ್ಬರೂ ತುಮಕೂರಿಗೆ ತೆರಳಿದರು. ಆದರೆ ಇದನ್ನೇ ಹೊಂಚು ಹಾಕಿ ಕುಳಿತಿದ್ದ ದರೋಡೆಕೋರರ ಗುಂಪು ರಾತ್ರೋರಾತ್ರಿ ಆನಂದಯ್ಯ ಎಂಬುವರ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನದ ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಎರಡು ದಿನಗಳ ಹಿಂದೆ ತನ್ನ ಮಗಳನ್ನು ಹೆರಿಗೆಗೆ ಬಿಟ್ಟಿದ್ದ ಆನಂದಯ್ಯ ಮತ್ತು ಹೆಂಡತಿ ತನ್ನ ಮಗಳ ಮನೆಯಲ್ಲೇ ಉಳಿದುಕೊಂಡಿದ್ದು, 13- 9- 2025 ರ ಬೆಳಗ್ಗೆ 7:00 ಸಮಯದಲ್ಲಿ ತಮ್ಮ ಸ್ವಗ್ರಾಮ ಬಡವನಪಾಳ್ಯ ಗ್ರಾಮದ ಆನಂದಯ್ಯ ತಮ್ಮ ಕುಮಾರ್ ಫೋನ್ ಮಾಡಿ ಕಳ್ಳತನ ನಡೆದಿರುವ ಬಗ್ಗೆ ಮಾಹಿತಿ ನೀಡಿದ್ದು, ದಂಪತಿಗಳಿಬ್ಬರೂ ಯಾವುದೇ ಅನಾಹುತ ಎದುರಾಗದೆ ಮಗಳ ಹೆರಿಗೆಯಿಂದ ಸಂತಸಪಟ್ಟಿದ್ದ ಕುಟುಂಬಕ್ಕೆ, ಕಳ್ಳತನ ನಡೆದ ಘಟನೆಯಿಂದ ಬರಸಿಡಿಲು ಬಡಿದಂತಾಗಿದೆ. ಕೂಡಲೇ ಮಗಳ ಮನೆಯಿಂದ ಬಂದು ನೋಡಲಾಗಿ, ಬಾಗಿಲು ಒಡೆದು ಒಳನುಗಿರುವ ಕಳ್ಳರಿಂದ ಬರೋಬ್ಬರಿ 280 ಗ್ರಾಂ ಚಿನ್ನ ಕಳುವಾಗಿರುವುದು ತಿಳಿದುಬಂದಿದೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಚೇಳೂರು ಪಿಎಸ್ಐ ನಾಗರಾಜು ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಅದೇನೇ ಇರಲಿ ಇತ್ತೀಚಿಗೆ ಗುಬ್ಬಿ ತಾಲೂಕಿನಲ್ಲಿ ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಗುಬ್ಬಿಯಲ್ಲಿ ನಡೆಯುತ್ತಿರುವ ಕಳ್ಳತನದ ಬಗ್ಗೆ ಪೊಲೀಸರು ಹೆಚ್ಚಿನ ಜಾಗೃತಿ ವಹಿಸಬೇಕಾಗಿದೆ.




