
ಕಲ್ಪತರು ನಾಡು, ಶೈಕ್ಷಣಿಕ ನಗರಿ, ಸ್ಮಾರ್ಟ್ ಸಿಟಿ ಅಂತಾ ಖ್ಯಾತಿ ಪಡೆದಿರುವ ನಮ್ಮ Tumakuru ನಗರವು ಕ್ರೀಡಾ ಸಿಟಿ ಆಗಿ ದಾಪುಗಾಲು ಇಡ್ತಾ ಇದ್ದು, ಒಂದೊಂದೆ ರಾಜ್ಯ ಮಟ್ಟದ, ರಾಷ್ಟ್ರಮಟ್ಟದ ಕ್ರೀಡೆಗಳು ನಡೆಯುತ್ತಿವೆ. ಕಳೆದ ಜನವರಿಯಲ್ಲಿ ರಾಜ್ಯಮಟ್ಟದ ಒಲಂಪಿಕ್ಸ್ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿತ್ತು. ಬಳಿಕ ತುಮಕೂರು ನಗರದಲ್ಲಿ ಒಂದೊಂದೆ ಕ್ರೀಡಾ ತರಬೇತಿ ಕೇಂದ್ರಗಳು ನಗರದಲ್ಲಿ ತಲೆ ಎತ್ತುತ್ತಿದ್ದು, ಇದೀಗ ರಾಷ್ಟ್ರೀಯ ಕ್ರೀಡಾಕೂಟ ನಡೆಯುತ್ತಿದೆ. ಈ ಮಧ್ಯೆ ಮಹಾತ್ಮ ಗಾಂಧಿ ಕ್ರೀಡಾಂಗಣದ ಶೌಚಾಲಯದಲ್ಲಿ ಸೂಜಿ ಹಾಗೂ ಸಿರಂಜ್ ಪತ್ತೆಯಾಗಿದ್ದು ಸಾಕಷ್ಟು ಅನುಮಾನಕ್ಕೆ ದಾರಿ ಮಾಡಿಕೊಡ್ತಿದೆ.
ಕ್ರೀಡಾಂಗಣದ ಶೌಚಾಲಯದಲ್ಲಿ ಸೂಜಿ ಹಾಗೂ ಸಿರಂಜ್ ಪತ್ತೆ
ಇಂದಿನಿಂದ ಮೂರು ದಿನಗಳ ಕಾಲ ತುಮಕೂರಿನಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಅಂಡರ್ 20 ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯುತ್ತಿದ್ದು, ಇಂದು ಗೃಹ ಸಚಿವ ಪರಮೇಶ್ವರ್ ಅವರಿಂದ ಇಂದು ಅದ್ಧೂರಿಯಾಗಿ ಉದ್ಘಾಟನೆ ಆಗಿದೆ. ದೇಶದ 28 ರಾಜ್ಯಗಳಿಂದ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಅತ್ಯಂತ ಉತ್ಸಾಹದಿಂದ ಕ್ರೀಡೆಯಲ್ಲಿ ಭಾಗಿಯಾಗ್ತಿದ್ದಾರೆ. ಆದ್ರೆ ಕ್ರೀಡಾಕೂಟ ಆರಂಭವಾದ ಮೊದಲ ದಿನವೇ ಕ್ರೀಡಾಂಗಣದ ಶೌಚಾಲಯದಲ್ಲಿ ಸೂಜಿ ಹಾಗೂ ಸಿರಂಜ್ ಪತ್ತೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ದಾರಿ ಮಾಡಿಕೊಡ್ತಿದೆ.
READ THIS : ಡಾ. ರಾಜ್ಕುಮಾರ್ ಜನ್ಮದಿನ – ವರನಟನನ್ನು ನೆನೆದ ರಾಜಕೀಯ ಗಣ್ಯರು

ಕ್ರೀಡಾಪಟುಗಳಿಂದ ಕಳ್ಳಾಟ ನಡೆದಿದೆಯಾ?
ಇಂದು ಬೆಳಗ್ಗೆ ರಾಷ್ಟ್ರೀಯ ಅಥ್ಲೆಟಿಕ್ಸ್ ಗೇಮ್ಸ್ ಶುರುವಾಗಿದ್ದು, ಅದ್ರಂತೆ ಬೆಳಗ್ಗೆ ಒಂದೂವರೆ ಸಾವಿರ ಮೀಟರ್ ಓಟ, ಜಾವಿಲಿನ್ ಥ್ರೋ ಸೇರಿದಂತೆ ಹಲವು ವಿಭಾಗದ ಮೊದಲ ಹಂತದ ಕ್ರೀಡೆ ನಡೆದಿದೆ. ಕ್ರೀಡೆ ನಡೆದ ಬಳಿಕ ಕ್ರೀಡಾಂಗಣದ ಶೌಚಾಲಯದಲ್ಲಿ ಸಿರಂಜ್ಗಳು ಪತ್ತೆಯಾಗಿದ್ದು, ಕ್ರೀಡೆಯಲ್ಲಿ ಭಾಗಿಯಾದ ಕೆಲ ಕ್ರೀಡಾಪಟುಗಳಿಂದ ಕಳ್ಳಾಟ ನಡೆದಿದೆಯಾ ಎಂಬ ಅನುಮಾನ ಶುರುವಾಗಿದೆ. ಅಲ್ದೇ ಕ್ರೀಡಾಪಟುಗಳಿಂದ ಅಕ್ರಮ ಉತ್ತೇಜಕ ಮದ್ದು ಸೇವನೆ ನಡೆದಿದ್ಯಾ ಎಂಬ ಶಂಕೆ ವ್ಯಕ್ತವಾಗ್ತಾ ಇದೆ.
ಡ್ರಗ್ ತೆಗೆದುಕೊಂಡಿರೋದು ಪತ್ತೆಯಾದ್ರೆ 4 ವರ್ಷ ಅಮಾನತು
ಇನ್ನು ಈ ಬಗ್ಗೆ ಸ್ಪರ್ಧಾ ನಿರ್ದೇಶಕ ಸತ್ಯನಾರಾಯಣ ಪ್ರತಿಕ್ರಿಯೆ ನೀಡಿದ್ದು, ಕ್ರೀಡಾಂಗಣದ ಶೌಚಾಲಯದಲ್ಲಿ ಉದ್ದೀಪನ ಮದ್ದಿನ ಸಿರಿಂಜ್ ಪತ್ತೆಯಾಗಿದೆ. ಅದನ್ನು ಉಪಯೋಗಿಸಿದ್ದಾರೆ ಅನ್ನೋದು ಖಚಿತವಾಗಿದೆ. ಆದ್ರೆ ಯಾರು ಅದನ್ನು ತಗೊಂಡಿದ್ದಾರೆ ಅನ್ನೋದು ಗೊತ್ತಿಲ್ಲ. ಸಿರಂಜ್ ಪತ್ತೆಯಾಗಿರುವುದರಿಂದ ಯಾರು ಮೆಡಲ್ ತಗೊಳ್ಳುತ್ತಾರೋ ಅವರನ್ನು ನಾಡಾ ಟೀಂನಿಂದ ತಪಾಸಣೆ ಮಾಡುತ್ತಾರೆ. ಒಂದು ವೇಳೆ ಡ್ರಗ್ ತೆಗೆದುಕೊಂಡಿರುವುದು ಪತ್ತೆಯಾದ್ರೆ ಅಂತಹ ಕ್ರೀಡಾಪಟುಗಳನ್ನು 4 ವರ್ಷಗಳ ಕಾಲ ಅಮಾನತು ಮಾಡಲಾಗುತ್ತೆ ಅಂತಾ ಎಚ್ಚರಿಕೆ ನೀಡಿದ್ರು.

ಸಿರಂಜ್, ಸೂಜಿ ಪತ್ತೆಯಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸ
ಒಟ್ನಲ್ಲಿ ಅದೇನೆ ಆಗಲಿ, ಸ್ಪೋರ್ಟ್ ಸಿಟಿಯತ್ತ ತುಮಕೂರು ನಗರ ದಾಪುಗಾಲು ಇಡುತ್ತಿದ್ದ ವೇಳೆಯೇ, ಕ್ರೀಡಾಂಗಣದ ಶೌಚಾಲಯದಲ್ಲಿ ಅಕ್ರಮ ಸಿರಂಜ್ ಹಾಗೂ ಸೂಜಿ ಪತ್ತೆಯಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗ್ತಿದೆ. ಟೈಯರ್ 2 ಸಿಟಿಯಾದ ತುಮಕೂರಿನಲ್ಲಿ ನ್ಯಾಷನಲ್ ಗೇಮ್ ನಡೆಯುತ್ತಿರುವುದು ಸಂತಸದ ವಿಚಾರ, ಆದ್ರೆ ಈ ರೀತಿಯ ನಿಷೇಧಿತ ವಸ್ತುಗಳ ಬಳಕೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಭದ್ರತೆಯ ಬಗ್ಗೆ ಪ್ರಶ್ನೆ ಎದ್ದಿದೆ. ಅಲ್ದೇ ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟ ನಡೆಸಲು ಸಾಕಷ್ಟು ಅಡಚಣೆ ಆಗಲಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

MUST WATCH : ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ – ಸರ್ಕಾರ ಒಂದು ರೂ. ಅನುದಾನ ಕೊಡ್ತಾ ಇಲ್ಲ




