Raichur News : ಮನೆಗಳಲ್ಲಿ ಏಕಾಏಕಿ ಭೂಮಿ ಕುಸಿದಿದ್ದು ಮನೆಯಲ್ಲೇ ಗುಂಡಿಗಳು ನಿರ್ಮಾಣವಾಗಿವೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಯದ್ದಲದೊಡ್ಡಿ (Yaddaladoddi) ಗ್ರಾಮದ ಮನೆಗಳಲ್ಲಿ ಏಕಾಏಕಿ ಭೂಮಿ ಕುಸಿದಿದ್ದು ಮನೆಯಲ್ಲೇ ಗುಂಡಿಗಳು ನಿರ್ಮಾಣವಾಗಿವೆ. ಕಳೆದ ಒಂದು ತಿಂಗಳಲ್ಲಿ ಐದು ಮನೆಗಳಲ್ಲಿ ಭೂಕುಸಿತ ಕಂಡು ಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ಸುತ್ತಲು ನೀರಾವರಿ ಪ್ರದೇಶವಿರುವುದರಿಂದ ಭೂ ಕುಸಿತ
ಇನ್ನು ಈ ಗ್ರಾಮ ತಗ್ಗು ಪ್ರದೇಶದಲ್ಲಿದ್ದು, ಸುತ್ತಲೂ ನೀರಾವರಿ ಪ್ರದೇಶ ಇರುವುದರಿಂದ ಭೂಮಿ ಸಡಿಲವಾಗಿ ಕುಸಿಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಾಜಶೇಖರ ರೆಡ್ಡಿ, ಗುರಪ್ಪ ಮೂಡಲಗಿರಿ, ಡಾ. ಕರಿಬಸಪ್ಪ, ರಮೇಶ, ಚನ್ನಬಸವ್ ಎಂಬುವವರ ಮನೆಗಳಲ್ಲಿ ಭೂಕುಸಿತ ಸಂಭವಿಸಿದೆ.
ಇದನ್ನು ಓದಿ : Vijayapura|ಸಿಲಿಂಡರ್ ಸ್ಪೋಟಗೊಂಡು ಮನೆಗೋಡೆ ಕುಸಿತ ..!

ಪ್ರಾಣಾಪಾಯದಿಂದ ಪಾರು
ಅದೃಷ್ಟವಶಾತ್ ಭೂ ಕುಸಿತ ವೇಳೆ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಂಡಿಯಲ್ಲಿ ಬಿದ್ದಿದ್ದ ಮಹಿಳೆಯೊಬ್ಬರನ್ನ ಮನೆಯವರೇ ಕಾಪಾಡಿದ್ದಾರೆ. ಕುಸಿದ ಭೂಮಿಯನ್ನ ಸರಿಪಡಿಸಿ ಗುಂಡಿಗಳನ್ನ ಮುಚ್ಚಿ ಜನ ಅಲ್ಲೇ ವಾಸಮಾಡುತ್ತಿದ್ದಾರೆ.
ಪರಿಹಾರ ನೀಡಬೇಕೆಂದು ಆಗ್ರಹ
ಭೂಮಿ ಕುಸಿತಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಸ್ಥಳೀಯ ಆಡಳಿತಕ್ಕೆ ತಿಳಿಸಿದ್ಧಾರೆ. ಸಿಂಧನೂರು ತಾಲ್ಲೂಕು ಆಡಳಿತ, ಹಿರಿಯ ಭೂ ವಿಜ್ಞಾನ ಇಲಾಖೆ, ಪಿಡಬ್ಲ್ಯೂಡಿ ಮತ್ತು ಪಿಆರ್ಇಡಿ ಇಲಾಖೆಗಳ ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಸಲು ಮುಂದಾಗಿದೆ. ಗ್ರಾಮಸ್ಥರು ಭೂಕುಸಿತವಾಗಿದ ಮನೆಗಳಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನು ನೋಡಿ : ಸೋಷಿಯಲ್ ಮೀಡಿಯಾದಲ್ಲಿ ಡಿಕೆಶಿ ಪೋಸ್ಟ್ – ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಾ..?!




