IAS Officer Mahantesh Bilagi Death : ಬೆಸ್ಕಾಂ ಎಂಡಿ, ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಕಲಬುರಗಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ರಾಜ್ಯದ ದಕ್ಷ ಮತ್ತು ಜನಪ್ರಿಯ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದ ಮಹಾಂತೇಶ್ ಬೀಳಗಿ (50) ಮಂಗಳವಾರ ಕಲಬುರಗಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೀಳಗಿ ಅವರ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರು ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.
ಜೇವರ್ಗಿಯ ಗೌನಳ್ಳಿ ಕ್ರಾಸ್ ಬಳಿ ಅಪಘಾತ
ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮದುವೆ ಕಾರ್ಯಕ್ರಮಕ್ಕಾಗಿ ರಾಮದುರ್ಗದಿಂದ ಕಲಬುರಗಿಯತ್ತ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದ ಬೀಳಗಿ, ಜೇವರ್ಗಿಯ ಗೌನಳ್ಳಿ ಕ್ರಾಸ್ ಬಳಿ ಅಪಘಾತಕ್ಕೀಡಾದರು. ಎದುರಿನಿಂದ ಬಂದ ಬೈಕ್ ಸವಾರನನ್ನು ತಪ್ಪಿಸಲು ಯತ್ನಿಸಿದಾಗ ಕಾರು ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದು ಕೆಳಕಡೆ ಪಲ್ಟಿಯಾದ್ದರಿಂದ ಭೀಕರ ಅಪಘಾತ ಸಂಭವಿಸಿದೆ.

ಚಿಕಿತ್ಸೆ ಫಲಿಸದೇ ಸಾವು
ಇನ್ನು ಈ ಅಪಘಾತದಲ್ಲಿ ಈರಣ್ಣ ಬೀಳಗಿ ಮತ್ತು ಶಂಕರ್ ಬೀಳಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ IAS ಅಧಿಕಾರಿ ಮಹಾಂತೇಶ್ ಬೀಳಗಿಯನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಬೀಳಗಿ ಮನೆಯಲ್ಲಿ ಶೋಕಸಾಗರ
ಮಹಾಂತೇಶ್ ಬೀಳಗಿ ಹುಟ್ಟೂರಿನಲ್ಲಿ ನೀರವ ಮೌನ ಆವರಿಸಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಟನಲ್ಲಿರುವ ಮಹಾಂತೇಶ್ ನಿವಾಸದಲ್ಲಿ ಸಂಬಂಧಿಕರು, ಜನರು ಜಮಾವಣೆಗೊಂಡಿದ್ದಾರೆ. ಸಾವಿನ ಸುದ್ದಿ ಕೇಳಿ ಮಹಾಂತೇಶ್ ಬೀಳಗಿಗೆ ಕಲಿಸಿದ ಗುರುಗಳು, ಸ್ನೇಹಿತರು ಮನೆಗೆ ಆಗಮಿಸಿ ಬೀಳಗಿ ನೆನೆದು ಭಾವುಕರಾದರು. ಆಸ್ಪತ್ರೆಗೆ ಕಲಬುರಗಿ ಜಿಲ್ಲೆಯ ಹಿರಿಯ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
ಇದನ್ನು ಓದಿ : SIRA NEWS|ಟಿ-20 ವಿಶ್ವಕಪ್ ಗೆದ್ದ ಅಂಧ ಮಹಿಳೆಯರು – ಶಿರಾದ ದೀಪಿಕಾಗೆ ಭರಪೂರ ಮೆಚ್ಚುಗೆ

ಬಡತನದಿಂದ ದಕ್ಷ IAS ಅಧಿಕಾರಿಯಾಗಿ ಬೆಳಗಿದ ಹಾದಿ
1974ರ ಮಾರ್ಚ್ 27ರಂದು ಬಡ ಕುಟುಂಬದಲ್ಲಿ ಜನಿಸಿದ ಬೀಳಗಿ, ಬಾಲ್ಯದಲ್ಲೇ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ವಿದ್ಯಾಭ್ಯಾಸ ಮುಂದುವರಿಸಿದ್ದರು. ತಾಯಿ ರೊಟ್ಟಿ ಮಾರಾಟ ಮಾಡಿ ಕುಟುಂಬವನ್ನು ನಡೆಸುತ್ತಿದ್ದರು. ಬಡತನವೇ ಅಡೆತಡೆ ಆಗದಂತೆ ಕಠಿಣ ಪರಿಶ್ರಮದಿಂದ ಓದಿ ಕೆಎಎಸ್ಗೆ ಆಯ್ಕೆಯಾಗಿದ್ದು, ನಂತರ 2012ರಲ್ಲಿ ಕರ್ನಾಟಕ ಕೇಡರ್ನ ಐಎಎಸ್ ಅಧಿಕಾರಿಯಾಗಿ ಸೇವೆಗೆ ಸೇರಿದ್ದರು.
ಬೆಸ್ಕಾಂ ಎಂಡಿ, ದಾವಣಗೆರೆ ಡಿಸಿ, ಉಡುಪಿ ಸೇರಿದಂತೆ ರಾಜ್ಯದ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಬೀಳಗಿ, ಧಾರವಾಡದಲ್ಲಿ ಸ್ಪರ್ಧಾರ್ಥಿಗಳಿಗೆ ಕೋಚಿಂಗ್ ನೀಡುವ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದರು.
ರಾಜ್ಯ ಕಳೆದುಕೊಂಡ ದಕ್ಷ ಅಧಿಕಾರಿ
ಪ್ರಸ್ತುತ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಾಂತೇಶ್ ಬೀಳಗಿ ಅವರ ಅಕಾಲಿಕ ನಿಧನದಿಂದ ರಾಜ್ಯದ ಒಬ್ಬ ಪ್ರಾಮಾಣಿಕ, ಜನಪ್ರಿಯ ಮತ್ತು ಶ್ರಮಜೀವಿ ಅಧಿಕಾರಿಯನ್ನು ಕಳೆದುಕೊಂಡಿರುವುದು ನಿಜಕ್ಕೂ ದುಃಖದ ಸಂಗತಿಯಾಗಿದೆ

ಇದನ್ನು ನೋಡಿ : ಕಂಪನಿಯಿಂದ ಇದೆಂಥಾ ಮೋಸ? ಗಿಫ್ಟ್ ಕೂಪನ್ ಕೊಟ್ಟು ವಂಚನೆಗೆ ಪ್ಲಾನ್!!




